ಮೈಸೂರು: ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ, ನನಗೆ ಮಾಜಿ ಸಚಿವ ಜಿ.ಟಿ.ದೇವೇಗೌಡರಷ್ಟು ವಿಶಾಲ ಹೃದಯವಿಲ್ಲ ಎಂದು ಪರೋಕ್ಷವಾಗಿ ಜಿಟಿಡಿ ಬಿಜೆಪಿಯವರ ಜೊತೆ ಸುತ್ತವುದಕ್ಕೆ ಸಾ.ರಾ.ಮಹೇಶ್ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಮಗೆ ಅರ್ಹತೆ ಇಲ್ಲ ಎಂದು ಟೀಕಿಸುತ್ತ, ಜನಾದೇಶ ಇಲ್ಲದಿದ್ದರೂ ಬಿಜೆಪಿಯವರು ಸರ್ಕಾರ ಮಾಡಿದ್ದಾರೆ. ನಮಗೆ ಅರ್ಹತೆ ಇಲ್ಲ ಎಂದ ಮೇಲೆ ಅವರ ಜೊತೆ ಸೇರಿ ಹೇಗೆ ದಸರಾ ಮಾಡುವುದು? ನನಗೆ ಜಿ.ಟಿ.ದೇವೆಗೌಡರಷ್ಟು ವಿಶಾಲ ಹೃದಯ ಇಲ್ಲ. ಸಚಿವ ಸೋಮಣ್ಣ ನನ್ನನ್ನು ಮಹಾ ಜ್ಞಾನಿ ಎಂದಿದ್ದಾರೆ. ನಮ್ಮಂತ ಜ್ಞಾನ ಇರುವವರು ಅವರ ಜೊತೆ ಹೇಗೆ ಕೂರುವುದು? ಹೀಗಾಗಿ ದಸರಾ ಕಾರ್ಯಕ್ರಮದಿಂದ ನಾನು ದೂರ ಊಳಿದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹುಣಸೂರಿನಲ್ಲಿ ಜೆಡಿಎಸ್ ಸೋಲುತ್ತದೆ ಎಂಬ ಜಿಟಿಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇವತ್ತಿನ ಪರಿಸ್ಥಿತಿಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ವಾತವಾರಣವಿದೆ. ಈ ಕುರಿತು ಜಿ.ಟಿ.ದೇವೇಗೌಡ ಅವರು ಹೇಳಿರುವುದು ನಿಜ. ಇದನ್ನು ಮುಂದಿನ ದಿನದಲ್ಲಿ ಜಿಟಿಡಿ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಮೇಲಿನ ಅನುಕಂಪ ಹಾಗೂ ನಮ್ಮ ಪಕ್ಷದಿಂದ ಗೆದ್ದು ಹೊರ ಹೋದವರು ಮಾಡಿರುವ ಡ್ಯಾಮೇಜ್‍ನಿಂದಾಗಿ ಪಕ್ಷದ ಪರಿಸ್ಥಿತಿ ಹುಣಸೂರಿನಲ್ಲಿ ಸರಿ ಇಲ್ಲ. ಇದನ್ನೇ ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಇದು ಸರಿಯಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪಕ್ಷ ಸಂಘಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.