ಮಡಿಕೇರಿ: ಜೆಡಿಎಸ್ ಮುಖಂಡ, ಮಾಜಿ ಸಚಿವ ಎಂಸಿ ನಾಣಯ್ಯ ಕಾಂಗ್ರೆಸ್ ಪಕ್ಷ ಸೇರ್ತಾರಾ…? ಸಿದ್ದರಾಮಯ್ಯ ಅವರು ಕೊಡಗು ಜಿಲ್ಲಾ ಪ್ರವಾಸಕ್ಕೆ ಬರುತ್ತಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಅವರು ನಾಣಯ್ಯ ಅವರನ್ನು ಭೇಟಿಯಾಗುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಇಂದು ಸಿಎಂ ಸಿದ್ದರಾಮಯ್ಯ ಉಡುಪಿಯಿಂದ ಮಡಿಕೇರಿಗೆ ಆಗಮಿಸಿದವರೇ ನೇರವಾಗಿ ನಾಣಯ್ಯ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಬಳಿಕ ನಾಣಯ್ಯ ಅವರು ಹೇಳಿದ ಮಾತಿನ ಧಾಟಿ ನೋಡಿದರೆ ಅವರು ಪಕ್ಷ ಬಿಡುವ ಸಾಧ್ಯತೆ ಬಹುತೇಕ ಹೆಚ್ಚಾದಂತಿದೆ.
ಉಡುಪಿಯ ಉಪ್ಪೂರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ನೇರವಾಗಿ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಕೊಡಗಿಗೆ ಆಗಮಿಸಿದರು. ಬಳಿಕ ಎಂಸಿ ನಾಣಯ್ಯ ಅವರ ಮನೆಗೆ ಭೇಟಿ ನೀಡಿ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.
Advertisement
Advertisement
ಭೇಟಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಂಸಿ ನಾಣಯ್ಯ ನನಗೆ ತುಂಬಾ ಆಪ್ತರು, ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಅಷ್ಟೇ. ಅವರನ್ನು ಜೆಡಿಎಸ್ ಸರಿಯಾಗಿ ಬಳಸಿಕೊಂಡಿಲ್ಲ, ಇದು ರಾಜಕೀಯ ಭೇಟಿ ಅಲ್ಲ. ಅವರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದರು.
Advertisement
ಆದರೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂಸಿ ನಾಣಯ್ಯ, ನನ್ನ ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯ ಬಂದಿದ್ದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ. ರಾಜಕೀಯ ನಿಂತ ನೀರಲ್ಲ, ಅದು ಹರಿಯುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಪಕ್ಷ ತೊರೆಯುವ ಸೂಚನೆ ನೀಡಿದರು.
Advertisement
ಇತ್ತೀಚೆಗೆ ಮಡಿಕೇರಿಯಲ್ಲಿ ಎಂಸಿ ನಾಣಯ್ಯ ಅವರು ಜೆಡಿಎಸ್ ಅತೃಪ್ತರ ಸಭೆ ನಡೆಸಿದ್ದು, ರಾಜ್ಯ ಜೆಡಿಎಸ್ ನಾಯಕರ ಮೇಲಿನ ತಮ್ಮ ಅತೃಪ್ತಿಯನ್ನು ಪ್ರದರ್ಶಿಸಿದರು. ಅಲ್ಲದೆ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಜನತಾದಳ ಸರ್ಕಾರ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಇದೇ ವೇಳೆ ಎಂಸಿ ನಾಣಯ್ಯ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.