Sunday, 22nd July 2018

Recent News

101 ರೂ. ನೀಡಿ ಬಾಡಿಗೆ ಪಡೆದಿರುವ ರೆಡ್ಡಿ ತೋಟದ ಮನೆಯ ವಿಶೇಷತೆ ಇಲ್ಲಿದೆ

ಬೆಂಗಳೂರು: ಎರಡು ದಿನಗಳ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಚಿತ್ರದುರ್ಗ ಜಿಲ್ಲೆಯ ನುಂಕಿಮಲೆ ಬೆಟ್ಟದ ರಸ್ತೆಯಲ್ಲಿರುವ ಎರಡು ಮಹಡಿಯ ತೋಟದ ಮನೆಯನ್ನು ಬಾಡಿಗೆಗಾಗಿ ಪಡೆದುಕೊಂಡಿದ್ದಾರೆ. ಆದ್ರೆ ಈ ಮನೆ ಜನಾರ್ದನ ರೆಡ್ಡಿ ಆಪ್ತ ಡಾ.ವೆಂಕಟೇಶ್ ಮಾಲೀಕತ್ವದಲ್ಲಿದ್ದು, ಕೇವಲ 101 ರೂ. ನೀಡಿ ಬಾಡಿಗೆಯನ್ನು ಪಡೆದುಕೊಂಡಿದ್ದಾರೆ.

ಮನೆಯ ವಿಶೇಷತೆ ಏನು?
ಮನೆ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಒಟ್ಟು 10 ಕೋಣೆಗಳನ್ನು ಹೊಂದಿದೆ. ಪ್ರತಿ ಕೋಣೆಯಲ್ಲೂ ಫ್ರಿಡ್ಜ್, ಎಲ್‍ಇಡಿ ಟಿವಿ ಜೊತೆ ಎರಡು ಹೈಟೆಕ್ ಸ್ನಾನದ ಕೋಣೆಗಳನ್ನು ಹೊಂದಿದೆ.

ಮನೆಯ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಾಜಕೀಯ ವಲಯಕ್ಕೆ ಅಗತ್ಯವಿರುವಂತೆ ಮನೆಯ ಮುಂಭಾಗದಲ್ಲಿ ನೆರಳಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳು ಮನೆಯಲ್ಲಿದೆ. ಅಷ್ಟೇ ಅಲ್ಲದೇ ಮನೆಯ ಎಲ್ಲ ಗೋಡೆಯ ಮೇಲೆಯೂ ಲಕ್ಷ್ಮೀ ದೇವಿಯ ಫೋಟೋಗಳನ್ನು ಹಾಕಲಾಗಿದೆ.

ಈಗಾಗಲೇ ಸೋಮಶೇಖರ ರೆಡ್ಡಿ 101 ರೂ.ಬಾಡಿಗೆಯನ್ನು ವೆಂಕಟೇಶ್ ಅವರಿಗೆ ನೀಡಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಗೆ ಶ್ರೀರಾಮುಲ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಕುಚುಕು ಗೆಳೆಯನ ಪರವಾಗಿ ಜನಾರ್ದನ ರೆಡ್ಡಿ ಪ್ರಚಾರ ಮಾಡಲಿದ್ದಾರೆ. ಇನ್ನೇನು ಎರಡ್ಮೂರು ದಿನಗಳಲ್ಲಿ ಜನಾರ್ದನ ರೆಡ್ಡಿ ಹೊಸ ಮನೆಯ ಪ್ರವೇಶ ಮಾಡಲಿದ್ದಾರೆ. ವೆಂಕಟೇಶ್ ತಮ್ಮ ಸ್ವಂತ ಖರ್ಚಿನಲ್ಲಿಯೇ ಸಾಮಾನ್ಯ ಮನೆಯನ್ನ ಅದ್ಧೂರಿ ಬಂಗಲೆಯಾಗಿ ಪರಿವರ್ತನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತೋಟದ ಮನೆ ಮೊಳಕಾಲ್ಮೂರು ಮತ್ತು ಬಳ್ಳಾರಿ ಜಿಲ್ಲೆಯ ಮಧ್ಯಭಾಗದಲ್ಲಿದ್ದು, ಇಲ್ಲಿಂದಲೇ ಜನಾರ್ದನ ರೆಡ್ಡಿ ರಾಜಕೀಯದ ಚದುರಂಗದಾಟ ಆಡಲಿದ್ದಾರೆ. ಸುಪ್ರಿಂಕೋರ್ಟ್ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಿಸಬಾರದು ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿಯೇ ಉಳಿದುಕೊಂಡು ಮೊಳಕಾಲ್ಮೂರು ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಹಿಡಿತ ಸಾಧಿಸಲು ರೆಡ್ಡಿ ಪ್ಲಾನ್ ಮಾಡಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

Leave a Reply

Your email address will not be published. Required fields are marked *