-ನಾನು ಸಾಲದಲ್ಲೇ ಇದ್ದೇನೆ
-ಗೌಡರ ಕುಟುಂಬದಿಂದ ನನ್ನ ಶಾಂತಿ, ಭಕ್ತಿಯ ದುರುಪಯೋಗ
-ಹೆಚ್‍ಡಿಕೆ ಮುಂದೆ ಹೆಚ್‍ಡಿಡಿ ಮಾತು ಶೂನ್ಯ
ಮೈಸೂರು: ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ಶಾಸಕ ಜಿ.ಟಿ ದೇವೇಗೌಡರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿವೃತ್ತಿ ಘೋಷಣೆ ಬಳಿಕ ಪಬ್ಲಿಕ್ ಟಿವಿಗೆ ನೀಡಿದ ಚುಟುಕು ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹೊರಹಾಕಿದ್ದು, ದಳಪತಿಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ನಾನು ಆರಂಭದ ಒಂದು ತಿಂಗಳು ಸಚಿವ ಸ್ಥಾನ ಪಡೆಯಲಿಲ್ಲ. ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ದಸರಾ, ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆ, ವಿಶ್ವವಿದ್ಯಾಲಯಗಳ ಘಟಿಕೋತ್ಸವ, ನಿರಂತರ ಸಭೆಗಳಲ್ಲಿ ಭಾಗಿಯಾಗಿದ್ದರಿಂದ ಸ್ವ-ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಿಗುತ್ತಿದ್ದ ಜಿ.ಟಿ.ದೇವೇಗೌಡ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನತೆ ನನ್ನ ಮೇಲೆ ಮುನಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಸಹ ವಿವಿಧ ಬೆಳವಣಿಗೆಗಳು ನಡೆದಿದ್ದರಿಂದ ಮೈತ್ರಿ ಸರ್ಕಾರ ಸಹ ಪತನಗೊಂಡಿತು. ಈ ಎಲ್ಲ ಕಾರಣಗಳಿಂದ ರಾಜಕಾರಣ ಸಾಕು ಎಂಬ ನಿರ್ಣಯಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
Advertisement
Advertisement
Advertisement
ರಾಜಕಾರಣ ಮೊದಲಿನ ಹಾಗೆ ಉಳಿದಿಲ್ಲ. ಉಸ್ತುವಾರಿ ಸಚಿವನಾದ್ರೂ ನಾನು ಬೇರೆಯವರ ಕ್ಷೇತ್ರ, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಒಂದು ಜಿಲ್ಲೆಯ ಉಸ್ತುವಾರಿ ಸಚಿವನಾದರೂ ನನಗೆ ಬೇಕಾದ ಅಧಿಕಾರಿಯನ್ನು ಹಾಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೇರೆಯವರು ತಮಗೆ ಬೇಕಾದವರನ್ನು ಹಾಕಿಸಿಕೊಳ್ಳಲು ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವಕಾಶ ನೀಡುವ ಮೂಲಕ ನನ್ನನ್ನು ಕಡೆಗಣಿಸಲಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಹೆಚ್‍ಡಿಕೆಗಾಗಿ ನೋವು ನುಂಗಿದೆ: ಅಂದು ನಾನು ಅಸಹಾಯಕನಾಗಿ ಇರದಿದ್ದರೆ ಸರ್ಕಾರಕ್ಕೆ ತೊಂದರೆ ಆಗುತ್ತಿತ್ತು. ನಾವು ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆ ಆಗಿತ್ತು. ಇದು ನಮ್ಮ ಮನೆ, ನಮ್ಮ ನಾಯಕ ಎಂದು ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ಕೆಲಸ ಮಾಡಿದೆ. ನನ್ನ ಉಸ್ತುವಾರಿ ಜಿಲ್ಲೆಯಲ್ಲಿ ನನಗಿಂತ ಬೇರೆಯವರ ಮಾತು ನಡೆಯುತ್ತಿತ್ತು. ಮಾಜಿ ಸಿಎಂ ಸಿದ್ದರಾಮಯ್ಯರು ಸಹ ಕೆಲ ಅಧಿಕಾರಿಗಳು ನಮಗೆ ಬೇಕೆಂದು ಹಾಕಿಸಿಕೊಂಡರು. ಬೇರೆಯವರಿಗಿಂತ ನಮ್ಮ ಪಕ್ಷದ ನಾಯಕರೇ ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ತುಂಬಾ ನೋವಾಯ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ತಾಯಿ ಚಾಮುಂಡಿಯಲ್ಲಿ ನನ್ನ ಕುಟುಂಬವೇ ಪ್ರಾರ್ಥನೆ ಮಾಡಿದೆ ಎಂದು ತಿಳಿಸಿದರು.
ನಾನು ಓದಿರೋದು 8ನೇ ತರಗತಿ ಮಾತ್ರ, ಹಾಗಾಗಿ ಉನ್ನತ ಶಿಕ್ಷಣ ಸಚಿವ ಸ್ಥಾನ ನನಗೆ ಬೇಡ ಎಂದು ಹೇಳಿದ್ರೂ ನೀಡಲಾಯಿತು. ನನಗೆ ಉನ್ನತ ಸ್ಥಾನ ನೀಡಿದ್ದು ಯಾಕೆ ಎಂಬುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ನಾನು ವಿಚಲಿತನಾಗದೇ ನನಗೆ ಸಚಿವ ಸ್ಥಾನವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೂ ಆಡಳಿತ ವ್ಯವಸ್ಥೆಯಲ್ಲಿ ನನ್ನ ಮಾತು ನಡೆಯಲಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು.
ರಾಜಕೀಯದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ ವಿಷಯವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಎದುರಲ್ಲೇ ವಿವರವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಹೇಳಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಜಿ.ಟಿ ದೇವೇಗೌಡರಿಗೆ ಪರ್ಯಾಯವಾಗಿ ಒಂದು ಶಕ್ತಿ(ನಾಯಕ)ಯನ್ನು ಬೆಳೆಸಬೇಕೆಂದು ಯೋಚನೆಯನ್ನು ಕುಮಾರಸ್ವಾಮಿ ಹೊಂದಿದಂತೆ ಇತ್ತು. ನಾನು ಕುಮಾರಸ್ವಾಮಿ ಬಳಿ ಪ್ರೀತಿ ಮತ್ತು ವಿಶ್ವಾಸವನ್ನು ನೋಡಲೇ ಇಲ್ಲ. ಹಾಗಾಗಿ ನನ್ನನ್ನು ನಿರ್ಲಕ್ಷ್ಯ ಮಾಡಲಾಯ್ತು ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಾನು ನೇರವಾದಿ: ನಾನು ಸ್ಪಲ್ಪ ನೇರವಾದಿಯಾಗಿದ್ದು, ಎಲ್ಲವನ್ನೂ ನೇರವಾಗಿ ಹೇಳುವುದರಿಂದ ಬಹುಶಃ ಅವರಿಗೆ ಇಷ್ಟವಾಗಿಲ್ಲ ಅನ್ನಿಸುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಮಾತನಾಡಿದ್ದೇನೆ, ಜೊತೆಯಲ್ಲಿ ಕುಳಿತು ಮಾತನಾಡಿದ್ದೇನೆ. ಆದರೆ ಆ ಪ್ರೀತಿ ಕೆಲಸದಲ್ಲಿ ಇರಲಿಲ್ಲ. ವರ್ಗಾವಣೆಯ ವಿಷಯದಲ್ಲಿ ನನ್ನ ಮಾತು ನಡೆಯುತ್ತಿರಲಿಲ್ಲ. ಸಾ.ರಾ.ಮಹೇಶ್ ಅವರನ್ನ ಮೈಸೂರಿನ ರಾಜಕಾರಣದಲ್ಲಿ ಬೆಳೆಸಬೇಕೆಂದು ಕುಮಾರಸ್ವಾಮಿ ಅವರು ಮುಂದಾಗಿದ್ದ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ದೇವೇಗೌಡರು ಮೊದಲು ಮಾತಾಡುತ್ತಿದ್ದರು, ಈವಾಗಲೂ ಮಾತನಾಡುತ್ತಾರೆ. ಆದರೆ ಕುಮಾರಸ್ವಾಮಿ ಅವರ ಮುಂದೆ ದೇವೇಗೌಡರ ಮಾತು ಶೂನ್ಯ ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ ಎಂದರು.
ಜೆಡಿಎಸ್ ಕಟ್ಟಿದ್ದು ಸಿದ್ದರಾಮಯ್ಯ & ಜಿಟಿಡಿ: ಮೈಸೂರು ಮತ್ತು ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಮತ್ತು ನಾನು ಜೊತೆಯಾಗಿ ಕಟ್ಟಿದ್ದೇವೆ. ಅಲ್ಲಿಯವರೆಗೂ ಮೈಸೂರಿನಲ್ಲಿ ಜೆಡಿಎಸ್ ಇರಲಿಲ್ಲ. ನಾವು ಚುನಾವಣೆಯಲ್ಲಿ ಗೆಲ್ಲುವರೆಗೂ ಚಾಮುಂಡೇಶ್ವರಿಯಲ್ಲಿ ಯಾರೂ ಗೆದ್ದಿರಲಿಲ್ಲ. 14 ವರ್ಷದ ಹುಡುಗ ಇದ್ದಾಗಿನಿಂದ ಹಿರಿಯ ನಾಯಕರೊಂದಿಗೆ ಬೆಳೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜಕಾರಣವೇ ಗೊತ್ತಿರಲಿಲ್ಲ. ನಾನೇ ಕರೆದುಕೊಂಡು ಬಂದು ಪ್ರತಿ ತಾಲೂಕುಗಳಿಗೆ ಭೇಟಿ ನೀಡಿದಾಗಲೇ ಕುಮಾರಸ್ವಾಮಿ ಅವರಿಗೆ ಮೈಸೂರು ರಾಜಕಾರಣ ಗೊತ್ತಾಗಿದೆ. ಸಿದ್ದರಾಮಯ್ಯರು ಪಕ್ಷ ತೊರೆದಾಗ ಹಲವು ನಾಯಕರನನ್ನು ಜೆಡಿಎಸ್ ಗೆ ಕರೆತಂದು ಪಕ್ಷ ಕಟ್ಟಿದ್ದೇನೆ. ಆದರೆ ಯಾಕೆ ನನ್ನ ಮೇಲೆ ರಾಜಕೀಯ ದ್ವೇಷ ಮಾಡಿದರು ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದರು.
ನಾನೋರ್ವ ಸಾಲಗಾರ: ಹೌಸಿಂಗ್ ಬೋರ್ಡ್ ನಲ್ಲಿ ಜಿ.ಟಿ.ದೇವೇಗೌಡ ದುಡ್ಡು ಪಡೆದಿದ್ದಾನೆ ಎಂದು ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾನೋರ್ವ ಸಾಲಗಾರನಾಗಿರುವ ವಿಚಾರ ಯಾರಿಗೂ ಗೊತ್ತಿಲ್ಲ. ಇಂದು ನಾನು ಸಾಲದ ಮೊತ್ತಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ. ಜಿ.ಟಿ.ದೇವೇಗೌಡನನ್ನು ಮುಗಿಸಬೇಕೆಂಬ ವರ್ಗ ನನ್ನ ಪಕ್ಷದಲ್ಲಿದೆ. ಕ್ಷೇತ್ರದ ಜನ ನನ್ನ ಎತ್ತಿಕೊಂಡು ಕುಣಿಸಿದರು. ನನ್ನ ಶಾಂತಿ, ಭಕ್ತಿ, ತ್ಯಾಗ ಮತ್ತು ಪ್ರಾಮಾಣಿಕತೆಯನ್ನು ದೇವೇಗೌಡರ ಕುಟುಂಬ ದುರುಪಯೋಗ ಮಾಡಿಕೊಂಡಿತು ಎಂದು ಗಂಭೀರ ಆರೋಪ ಮಾಡಿದರು.
ನನ್ನ ಮರಿದೇವೇಗೌಡ ಎಂದು ಯಾವಾಗಲೂ ವರಿಷ್ಠರು ನನ್ನನ್ನು ತುಂಬಾ ಪ್ರೀತಿ ಕಂಡರು. 2004ರಲ್ಲಿ ಧರಂಸಿಂಗ್ ನೇತೃತ್ವದಲ್ಲಿ ಸರ್ಕಾರ ರಚಿಸಿದಾಗ ನನ್ನ ಮಂತ್ರಿ ಮಾಡುತ್ತೇನೆ ಎಂದು ಹೇಳಿ ಮಾಡಲಿಲ್ಲ. ಕುಮಾರಸ್ವಾಮಿ ಸಿಎಂ ಆದಾಗ ಏಳು ತಿಂಗಳು, ಈವಾಗ 19 ತಿಂಗಳು ಮಂತ್ರಿ ಆಗಿದ್ದೇನೆ. 19 ತಿಂಗಳು ನನ್ನನ್ನು ಮಂತ್ರಿ ಮಾಡಿದ್ದು ದೊಡ್ಡ ಸಾಧನೆ. ನಾನು ಎಂದಿಗೂ ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಲ್ಲ. ನನ್ನ ಮಗ ಹರೀಶ್ ಗೌಡನನ್ನು ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಲ್ಲಿಸಲ್ಲ ಎಂದು ಪಕ್ಷದ ವರಿಷ್ಠರ ಮುಂದೆ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ನಿವೃತ್ತಿ ಬಳಿಕ ಚಾಮುಂಡೇಶ್ವರಿಯಿಂದ ಹರೀಶ್ ಸ್ಪರ್ಧೆ ಮಾಡಲು ಅಭ್ಯಂತರವಿಲ್ಲ. ರಾಜಕೀಯ ಜೀವನದಲ್ಲಿ ನನ್ನ ಪುತ್ರನನ್ನು ಎಂಎಲ್‍ಸಿ ಮಾಡಿ ಎಂದೂ ಕೇಳಿಲ್ಲ ಎನ್ನುವ ಮೂಲಕ ಕುಟುಂಬ ರಾಜಕಾರಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಿವೃತ್ತಿಗೆ ಕಾರಣವೇನು?
ಇವತ್ತಿನ ರಾಜಕೀಯ ನಾಯಕರಿಗೆ ಪಕ್ಷ ನಿಷ್ಠೆ ಇಲ್ಲ. ತಮ್ಮ ಸ್ವಾರ್ಥಕ್ಕೊಸ್ಕರ ಎಂತಹ ನಾಯಕನನ್ನು ಬೇಕಾದ್ರೂ ಮರಳು ಮಾಡುತ್ತಾರೆ. ಅಂತಹ ಸನ್ನಿವೇಶಗಳನ್ನು ನೋಡಿಕೊಂಡು ನನಗೆ ರಾಜಕೀಯ ಮಾಡಲು ಸಾಧ್ಯವಿಲ್ಲ. ಬಿಜೆಪಿಯಲ್ಲಿದ್ದಾಗ ಒಂದೂ ದಿನ ದೇವೇಗೌಡರನ್ನು ನೋಡಲು ಹೋಗಿಲ್ಲ. ಅಂದು ದೇವೇಗೌಡರು ಮತ್ತು ಸದಾನಂದ ಗೌಡರನ್ನು ಜಿಟಿಡಿ ಒಂದು ಮಾಡಿದ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದರು. ಈ ಮಾತನ್ನು ಯಡಿಯೂರಪ್ಪ ಸಹ ನಂಬಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವ ನಾಯಕ ನಾನಲ್ಲ ಎಂದು ಶೋಭಾ ಕರಂದ್ಲಾಜೆ ಅವರಿಗೆ ಹೇಳಿದ್ದೆ ಎಂದು ಪಕ್ಷಾಂತರಿಗಳಿಗೆ ಚಾಟಿ ಬೀಸಿದರು.
ಬಿಜೆಪಿಯ ಯಾವ ನಾಯಕರು ನನ್ನನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿಲ್ಲ. ನಾನು ಸಹ ನಿಮ್ಮ ಪಕ್ಷಕ್ಕೆ ಬರುತ್ತೇನೆಂದು ಹೇಳಿಲ್ಲ. ಆದರೂ ಕೆಲವರು ಈ ಸಂಬಂಧ ಸುಳ್ಳು ಸುದ್ದಿ ಹರಿದಾಡಿಸುತ್ತಿದ್ದಾರೆ. ನನಗೆ ಯಾರೂ ರಾಜಕೀಯ ಗುರುಗಳಿಲ್ಲ. 1969ರಿಂದ ಸಾರ್ವಜನಿಕ ರಂಗದಲ್ಲಿದ್ದೇನೆ. ಅಂದು ನಮ್ಮ ಬೆಂಬಲ ಪಡೆದು ಹಲವರು ಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದಾರೆ ಎಂದರು.