ಚಿತ್ರದುರ್ಗ: ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರಿಗೆ ಕಳಕಳಿ ಇಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ವಾಗ್ದಾಳಿ ನಡೆಸಿದ್ರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಅವರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಭದ್ರಾ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಬಿಜೆಪಿ ಶ್ರಮ ವಹಿಸಿಲ್ಲ. ಮಹದಾಯಿ ಯೋಜನೆ ಜಾರಿಗೊಳಿಸಲು ಬಿಜೆಪಿಗೆ ಬದ್ಧತೆ ಇಲ್ಲ. ಗೋವಾ, ಮಹಾರಾಷ್ಟ್ರದೊಂದಿಗೆ ಮಾತನಾಡಿ ನೀರಿನ ಸಮಸ್ಯೆ ಪರಿಹರಿಸಬೇಕಿತ್ತು. ಭದ್ರಾ ಯೋಜನೆ ತಾಂತ್ರಿಕ ದೋಷದಿಂದ ತಡವಾಗಿದೆ. ಮಾಹಿತಿ ಕೊರತೆಯಿಂದ ಬಿಜೆಪಿ ಇಲ್ಲಸಲ್ಲದ ಆರೋಪ ಸರಿಯಲ್ಲ. ಯೋಜನೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ರು.
ಏಪ್ರಿಲ್ 13 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕೋಟೆನಾಡು ಚಿತ್ರದುರ್ಗಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಾರೆ. ಈ ವೇಳೆ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಬೃಹತ್ ಸಮಾವೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ಸಚಿವರಾದ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕಾಗಿ ವಿನೂತನ ಜರ್ಮನ್ ಟೆಂಟ್ ಹೌಸ್ ವೇದಿಕೆ ರೆಡಿ ಮಾಡಲಾಗುತ್ತಿದೆ. ವೇದಿಕೆ ಮುಂಭಾಗದಲ್ಲಿ 25000 ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ರಾಹುಲ್ ಗಾಂಧಿಗೆ ಕೋಟೆ ನಾಡನ್ನಾಳಿದ ಪಾಳೆಗಾರ ವೀರ ಮದಕರಿನಾಯಕರ ಪ್ರತಿಮೆ ನೀಡಿ ಸನ್ಮಾನ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಅಂದ್ರು.
ಈ ವೇಳೆ ಮೈತ್ರಿ ಅಭ್ಯರ್ಥಿ ಚಂದ್ರಪ್ಪ, ಶಾಸಕ ರಘುಮೂರ್ತಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.