ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ 2 ದಿನದ ಹಿಂದೆಯಷ್ಟೇ ವಿನಯ್ ಗುರೂಜಿ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಗುರೂಜಿ ಮಾತು ಕೇಳಿ ಡಿಕೆಶಿ ಹೌಹಾರಿದ್ದಾರೆ.
ಡಿ.ಕೆ ಶಿವಕುಮಾರ್ 2 ದಿನದ ಹಿಂದೆ ಅವದೂತ ವಿನಯ್ ಗುರೂಜಿಯನ್ನು ಬೆಂಗಳೂರಿನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ಭೇಟಿ ಮಾಡಿದ ಸಂದರ್ಭದಲ್ಲಿ ವಿನಯ್ ಗುರೂಜಿ ಡಿಕೆಶಿಗೆ ನಿಮ್ಮ ಸ್ಥಿತಿ ಮುಳ್ಳಿನ ಮೇಲೆ ಬಿದ್ದ ಪಂಚೆಯಂತಾಗಿದೆ. ಎಚ್ಚರಿಕೆಯಿಂದ ಪಂಚೆ ಎತ್ತಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ರಾಜಕಾರಣ ಏನೇ ಇರಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಒಮ್ಮೆ ಭೇಟಿಯಾಗುವುದು ಒಳ್ಳೆಯದು ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಗುರೂಜಿ ಮಾತು ಕೇಳಿದ ಡಿಕೆಶಿ, ಅಮಿತ್ ಶಾ ಭೇಟಿಗೆ ನನ್ನ ಮನಸ್ಸು ಒಪ್ಪಲ್ಲ. ಅಲ್ಲದೆ ನನ್ನ ಪಕ್ಷ ಕೂಡ ಒಪ್ಪಲ್ಲ. ಬೇರೆ ಏನಾದರು ಮಾರ್ಗ ಇದ್ದರೆ ಹೇಳಿ ಎಂದು ಕೇಳಿದ್ದಾರೆ. ಆಗ ವಿನಯ್ ಗುರೂಜಿ ಗುರು ಪಾರಾಯಣ ಹಾಗೂ ಜಪಮಾಲೆಯನ್ನು ಡಿಕೆಶಿಗೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಎರಡು ಎಳನೀರು ನೀಡಿ ಅದನ್ನು ಸ್ವೀಕರಿಸುವಂತೆ ಸೂಚಿಸಿದ್ದಾರೆ. ಅಂತಿಮವಾಗಿ ಗುರೂಜಿ ನಾನು ಅಮಿತ್ ಶಾ ಅವರನ್ನು ಭೇಟಿಯಾಗಲಾರೆ. ಆದರೆ ದೇವರನ್ನು ದೈವ ಶಕ್ತಿಯನ್ನು ನಂಬುತ್ತೇನೆ. ಅದರಿಂದಲೇ ನನಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ನನ್ನದು ಆಶೀರ್ವದಿಸಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಂದ ಬಂಧಿತರಾಗಿ 48 ದಿನಗಳ ಕಾಲ ತಿಹಾರ್ ಜೈಲು ಅನುಭವಿಸಿ ನಂತರ ಡಿಕೆಶಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಬೆಂಗಳೂರಿಗೆ ಬಂದಿರುವ ಮಾಜಿ ಸಚಿವರು ಟೆಂಪಲ್ ರನ್ ನಡೆಸಿದ್ದರು. ಈ ಮಧ್ಯೆ ಗುರೂಜಿಯನ್ನು ಕೂಡ ಭೇಟಿ ಮಾಡಿದ್ದರು ಎನ್ನಲಾಗಿದೆ.