ಬೆಂಗಳೂರು: ನನಗೆ ಈಗ ಆರ್ಥಿಕ ಸಮಸ್ಯೆ ಇರುವುದರಿಂದ ಈ ಹಿಂದೆ ಬೇಡ ಎಂದಿದ್ದ ಸಚಿವ ಸ್ಥಾನದ ಭತ್ಯೆಯನ್ನು ವಾಪಸ್ ನೀಡಲು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾಗಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಸಕನಾಗಿ, ಸಚಿವನಾಗಿ ಯಾವುದೇ ಭತ್ಯೆ ಪಡೆದಿಲ್ಲ. ಅಲ್ಲದೆ ವಸತಿ ಸಚಿವನಾಗಿದ್ದಾಗಲೂ ಯಾವುದೇ ಭತ್ಯೆ ಪಡೆದಿಲ್ಲ. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಹೆಚ್ಚಿನ ನೋವುಂಟಾಗಿದೆ. ಸದ್ಯ ನನ್ನ ವೈಯಕ್ತಿಕ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ಕಾರಣ 23 ತಿಂಗಳ ಅವಧಿಯ ಸಚಿವ ಸ್ಥಾನದ ಭತ್ಯೆಯನ್ನು ಮಾತ್ರ ವಾಪಸ್ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದೇನೆ. ಆದರೆ ಈ ಹಣ ನೀಡಲು ಕಾನೂನು ಸಮಸ್ಯೆ ಎದುರಾಗಿದೆ ಎಂಬ ಮಾಹಿತಿ ಇದ್ದು, ಏನಾಗಲಿದೆ ಎಂಬುವುದನ್ನು ಕಾದು ನೋಡುತ್ತೇನೆ ಎಂದರು.
Advertisement
ಹಲವು ವರ್ಷಗಳಿಂದ ಈ ಆದರ್ಶವನ್ನು ಪಾಲಿಸಿಕೊಂಡು ಬರುತ್ತಿದ್ದೆ. ಆದರೆ ಆರ್ಥಿಕ ಸಂಕಷ್ಟದಿಂದ ಮನಸ್ಸಿಗೆ ಸ್ವಲ್ಪ ನೋವಾಗಿದೆ. ಅಲ್ಲದೇ ಈ ಹಿಂದೆ ಚುನಾವಣೆಯಗಳಲ್ಲಿ ಹಣ ವೆಚ್ಚ ಮಾಡುವ ಅಗತ್ಯವಿರಲಿಲ್ಲ. ಆದರೆ ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಹಣವೂ ವೆಚ್ಚವಾಗಿದೆ. ಆದರೆ ಆದರ್ಶಗಳನ್ನು ಪಾಲಿಸುವುದರಿಂದ ಹೀಗೆ ಆಗುತ್ತದೆ ಎಂದು ಹೇಳುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
Advertisement
Advertisement
ಎಷ್ಟು ಬಾಕಿಯಿದೆ?
ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ 23 ತಿಂಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಸರ್ಕಾರದಿಂದ ಬರುವ ಮನೆ ಬಾಡಿಗೆ, ಟಿಎ, ಡಿಎ ಯಾವುದನ್ನು ಪಡೆದಿರಲಿಲ್ಲ. ಅಲ್ಲದೇ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆಯೂ ನೀಡುವ ಹೆಚ್ಚುವರಿ ಮೊತ್ತದ ಭತ್ಯೆಯನ್ನು ಪಡೆದಿರಲಿಲ್ಲ. ಸರ್ಕಾರ ನೀಡುವ ನಿವಾಸವನ್ನು ತೆಗೆದುಕೊಳ್ಳದೆ ಮಾಜಿ ಸಚಿವರು ಸ್ವತಃ ಹಣದಲ್ಲಿ ಕಾರ್ಯನಿರ್ವಹಿಸಿದ್ದರು. ರೆಡ್ಡಿಯವರ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಅವರೇ ಹೇಳಿರುವಂತೆ 23 ತಿಂಗಳ ಮೊತ್ತ ಸುಮಾರು 46 ಲಕ್ಷ ರೂ.ಗಿಂತಲೂ ಹೆಚ್ಚಾಗಿದೆ.
Advertisement
ಕಾನೂನು ಸಮಸ್ಯೆ: ಸದ್ಯ ಮಾಜಿ ಸಚಿವರು ಸದನದ ಸ್ಪೀಕರ್ ಅವರಿಗೆ ಬರೆದಿರುವ ಪತ್ರವನ್ನು ಹಣಕಾಸು ಇಲಾಖೆಗೆ ವರ್ಗಾಯಿಸಲಾಗಿದೆ. ಆದರೆ ಸದನದ ನಿಯಮಗಳ ಪ್ರಕಾರ ಯಾವುದೇ ಸಚಿವರು ಭತ್ಯೆ ಬೇಡ ಎಂದು ನಿರಾಕರಿಸಿದ ಬಳಿಕ ಮತ್ತೊಮ್ಮೆ ಭತ್ಯೆಯ ಹಣ ಪಡೆಯಲು ಆಡಳಿತ ಸರ್ಕಾರದ ಅವಧಿಯ ವೇಳೆವರೆಗೂ ಮಾತ್ರ ಸಾಧ್ಯವಿದೆ. ಈ ಅಂಶವನ್ನು ಸ್ಪೀಕರ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದು, ಹೊಸ ವಿಧಾನಸಭೆ ರಚನೆಯಾದ ಕಾರಣ ಭತ್ಯೆ ವಾಪಸ್ ನೀಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆಗೆ ತಿಳಿಸಿದೆ. ಹೀಗಾಗಿ ರಾಯರೆಡ್ಡಿ ಅವರಿಗೆ ಹಣ ಸಿಗುತ್ತಾ ಸಿಗುವುದಿಲ್ಲವೇ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಕೊಪ್ಪಳದ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದ ಬಸವರಾಜರಾಯ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹಾಲಪ್ಪ ಆಚಾರ್ ವಿರುದ್ಧ ಸೋತಿದ್ದರು.