ಹಾಸನ: ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತೆ ಮದುವೆಯಾಗುವುದರ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಇಂದು ಹಾಸನದಲ್ಲಿ ಜ್ಞಾನಕ್ಷಿ ಕನ್‍ವೆನ್‍ಷನ್ ಸೆಂಟರ್‍ನಲ್ಲಿ ನಡೆದ ಅದ್ಧೂರಿ ಮದುವೆಗೆ ಸ್ವತಃ ರೇವಣ್ಣನವರ ತಂದೆ, ಮಾಜಿ ಪ್ರಧಾನಿಯಾದ ಹೆಚ್.ಡಿ ದೇವೇಗೌಡ್ರು ಹಾಗೂ ತಾಯಿ ಚನ್ನಮ್ಮ ಸಾಕ್ಷಿಯಾದ್ರು.
ಹೆಚ್.ಡಿ ರೇವಣ್ಣ ಮತ್ತೆ ಮದುವೆಯಾಗಿದ್ದಾರೆ ಎಂಬ ಸುದ್ದಿ ತಿಳಿದು ಶಾಕ್ ಆಗ್ಬೇಡಿ. ಮೊನ್ನೆಯಷ್ಟೇ 60ರ ವಸಂತಕ್ಕೆ ರೇವಣ್ಣ ಕಾಲಿರಿಸಿದ ಹಿನ್ನೆಲೆಯಲ್ಲಿ ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಷಷ್ಠಿಪೂರ್ತಿ ಹಿನ್ನೆಲೆಯಲ್ಲಿ ಇಂದು ರೇವಣ್ಣ ಮತ್ತೊಮ್ಮೆ ಭವಾನಿ ರೇವಣ್ಣನವರಿಗೆ ತಾಳಿ ಕಟ್ಟುವುದರ ಮೂಲಕ ಸಂಭ್ರಮ ಹಂಚಿಕೊಂಡರು.
ಹೀಗೆ ಮತ್ತೊಮ್ಮೆ ದಾಂಪತ್ಯಕ್ಕೆ ಕಾಲಿರಿಸಿದ ದಂಪತಿಗೆ ಆದಿಚುಂಚನಗಿರಿಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ಮಾಡಿದ್ರು. ತಂದೆ-ತಾಯಿಯ ಈ ಸುಂದರ ಕ್ಷಣಕ್ಕೆ ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಸೂರಜ್ ಅವರ ಭಾವಿ ಪತ್ನಿ ಸಾಕ್ಷಿಯಾದ್ರು. ಇವರಷ್ಟೇ ಅಲ್ಲದೇ ಕುಟುಂಬ ಸದಸ್ಯರು, ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸಿ ಶುಭಕೋರಿದ್ರು.