ಬಾಗಲಕೋಟೆ: ಹೈದರಾಬಾದ್ ಪಶುವೈದ್ಯೆಯ ಗ್ಯಾಂಗ್ ರೇಪ್ ಮತ್ತು ಹತ್ಯೆ ಮಾಡಿದ ಕಾಮುಕರಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಗ್ರಹಿಸಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂತೋಷ್ ಹೆಗಡೆ, ಕಾಮುಕರಿಗೆ ಗಲ್ಲು ಶಿಕ್ಷೆ ಬಿಟ್ಟು ಬೇರೆ ಯಾವ ಶಿಕ್ಷೆಯೂ ಸರಿ ಅಲ್ಲ. ಆದರೂ ಕೆಲವು ಬಾರಿ ಮಾನವೀಯ ಹಕ್ಕಿನ ಮೇಲೆ ಗಲ್ಲು ಶಿಕ್ಷೆ ಬೇಡ ಎಂದು ವಾದ ಮಾಡುತ್ತಾರೆ. ಇದು ಮಾನವೀಯತೆ ಇಲ್ಲದ ಕ್ರೂರವಾದಂತಹ ಕೃತ್ಯ. ಆದ್ದರಿಂದ ಇಂತಹ ಘಟನೆಯಾದಾಗ ಗಲ್ಲು ಶಿಕ್ಷೆಯೇ ಆಗಬೇಕು. ಅದು ವಿಳಂಬವಾಗಬಾರದು ತೀವ್ರಗತಿಯಲ್ಲಿ ತೀರ್ಪು ಪ್ರಕಟವಾಗಬೇಕು. ತಡವಾದರೆ ಅದರ ಪ್ರಾಮುಖ್ಯತೆ ಹೋಗುತ್ತದೆ ಎಂದರು.
Advertisement
Advertisement
ಡಿಕೆಶಿಗೆ ಪುನಃ ಇಡಿ ನೊಟೀಸ್ ನೀಡಿರುವ ವಿಚಾರದ ಬಗ್ಗೆ ಮಾತನಾಡಿ, ವಿಚಾರಣೆಗೆ ಕರೆದರೆ ಹೋಗಲೇಬೇಕು. ಅದಕ್ಕೆ ರಾಜಕೀಯ ಪಿತೂರಿ ಎಂದು ಹೇಳುವುದು ಸರಿಯಲ್ಲ. ಇಡಿ ಆದೇಶ ನೊಟೀಸ್ ಪ್ರಕಾರ ನಡೆಯಬೇಕು. ತಪ್ಪು ಮಾಡಿದ ಆರೋಪದ ಮೇಲೆ ಇವೆಲ್ಲ ಪ್ರಕ್ರಿಯೆಗಳು ನಡೆಯುತ್ತವೆ ಎಂದರು. ಇದೇ ವೇಳೆ ಬಿಜೆಪಿಯಿಂದ ಇಡಿ ಸ್ವಾಯತ್ತ ಸಂಸ್ಥೆ ದುರುಪಯೋಗ ಎಂಬ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಬ್ಬರು ಒಂದೇ ತಾನೇ? ಇವರ ಬಗ್ಗೆ ಅವರು ಕೇಳಿದರೆ ನೀವು ಮಾಡಿಲ್ಲವೇನ್ರಿ ಎಂದು ಅವರು ಹೇಳುತ್ತಾರೆ ಎಂದು ತಿರುಗೇಟು ನೀಡಿದರು.
Advertisement
ರಾಮಮಂದಿರ ಐತಿಹಾಸಿಕ ತೀರ್ಪಿನ ಬಗ್ಗೆ ಮಾತನಾಡಿ, ಅದು ಸರಿಯೋ ತಪ್ಪು ಎಂದು ನಾನು ಪರಾಮರ್ಶೆಗೆ ಇಳಿಯುವುದಿಲ್ಲ. ಇದು ದೇಶದ ಶಾಂತಿಗಾಗಿ ಕೊಟ್ಟ ತೀರ್ಪು. ಇದನ್ನು ನಾವು ಪಾಲಿಸಲೇಬೇಕು. ಪ್ರತಿಭಟನೆಯೂ ಬೇಡ, ಸಂಭ್ರಮವೂ ಬೇಡ ಎಂದು ಹೇಳಿದರು.
Advertisement
ಸುಪ್ರೀಂ ತೀರ್ಪು ಮರುಪರಿಶೀಲನೆ ಹಾಕುತ್ತಾರೆ ಕೆಲವರಿಗೆ ಇಲ್ಲಿ ಶಾಂತಿ ಇರುವುದು ಬೇಕಾಗಿಲ್ಲ. ಮರುಪರಿಶೀಲನೆ ಅರ್ಜಿ ಹಾಕಿದ ಧರ್ಮದವರಲ್ಲೇ ಕೆಲವರು ನಾವು ಅರ್ಜಿ ಹಾಕುವುದಿಲ್ಲ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಅದನ್ನೆಲ್ಲ ಮರೆತುಬಿಡೋಣ. ಧರ್ಮದ ವಿಚಾರ ಕೋರ್ಟ್ ನವರು ತೀರ್ಪು ಕೊಡುವುದಕ್ಕೆ ಅರ್ಹರಲ್ಲ ಎಂಬುದು ನನ್ನ ಅನಿಸಿಕೆ. ಯಾರದೂ ಸ್ವಂತ ಜಮೀನು ಹೋಗಿಲ್ಲ. ತೀರ್ಪಿಗೆ ಮನ್ನಣೆ ಕೊಡೋಣ ಎಂದರು. ಅಲ್ಲದೆ ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಹಾರ ಹಾಕಿ ಸಂಭ್ರಮಿಸುವುದು ತಪ್ಪು ಎಂದು ಪುನರುಚ್ಚರಿಸಿದರು.