ಮುಂಬೈ: ನವಿ ಮುಂಬೈ (Navi Mumbai) ರೋಡ್ ರೇಜ್ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ (Puja Khedkar) ಅವರ ಕಾರು ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಲುಂಡ್ – ಐರೋಲಿ ರಸ್ತೆಯಲ್ಲಿ ಪ್ರಹ್ಲಾದ್ ಕುಮಾರ್ (22) ಎಂಬವರು ಚಲಾಯಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಟ್ರಕ್, ಖೇಡ್ಕರ್ ಅವರ ಕಾರಿನ ನಡುವೆ ಸಣ್ಣಪ್ರಮಾಣದ ಅಪಘಾತವಾಗಿತ್ತು. ಇದು ಚಾಲಕ ಹಾಗೂ ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ಅಂಗರಕ್ಷಕ ಪ್ರಫುಲ್ ಸಲುಂಖೆ ಕುಮಾರ್ ಸೇರಿ ಟ್ರಕ್ ಚಾಲಕನನ್ನು ಕಟ್ಟಿ ಹಾಕಿ ಅಪಹರಿಸಿದ್ದರು. ಬಳಿಕ ಆತನನ್ನು ಪುಣೆಯಲ್ಲಿರುವ ಬಂಗಲೆಗೆ ಕರೆದೊಯ್ದಿದ್ದರು. ಇದನ್ನೂ ಓದಿ: ಐಎಎಸ್ ಹುದ್ದೆಗೆ ನಕಲಿ ಪ್ರಮಾಣಪತ್ರ: ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು
ಟ್ರಕ್ ಮಾಲೀಕನ ದೂರಿನ ಆಧಾರದ ಮೇಲೆ, ರಬಾಲೆ ಪೊಲೀಸರು ಭಾನುವಾರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಕಾರಿನ ಗುರುತು ಪತ್ತೆಹಚ್ಚಿ, ಖೇಡ್ಕರ್ ಬಂಗಲೆಗೆ ತೆರಳಿದ್ದರು. ಈ ವೇಳೆ ಪೂಜಾ ಅವರ ತಾಯಿ ಪೊಲೀಸರಿಗೆ ಒಳಬರದಂತೆ ತಡೆದಿದ್ದರು. ಅಂತಿಮವಾಗಿ ಪೊಲೀಸರು ದಾಳಿ ನಡೆಸಿ ಟ್ರಕ್ ಚಾಲಕನನ್ನು ರಕ್ಷಿಸಿದ್ದರು.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಖೇಡ್ಕರ್ ಅವರ ತಾಯಿಯ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಿದ್ದಾರೆ. ಅಲ್ಲದೇ ಚಾಲಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ಪೂಜಾ ಖೇಡ್ಕರ್ ಈ ಹಿಂದೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ವಂಚನೆ, ಒಬಿಸಿ ಮತ್ತು ಅಂಗವೈಕಲ್ಯ ಕೋಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಎದುರಿಸಿದ್ದರು. ಇದನ್ನೂ ಓದಿ: IAS ಸೇವೆಯಿಂದಲೇ ಪೂಜಾ ಖೇಡ್ಕರ್ ವಜಾ – ಕೇಂದ್ರ ಸರ್ಕಾರ ಆದೇಶ