– ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ
ಲಂಡನ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಇಂಗ್ಲೆಂಡ್‍ನ ಮಾಜಿ ನಾಯಕ, ನಿರೂಪಕ ನಾಸಿರ್ ಹುಸೇನ್ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಎಂ.ಎಸ್.ಧೋನಿ ಒಮ್ಮೆ ನಿವೃತ್ತಿ ಘೋಷಿಸಿ ಬಿಟ್ಟರೆ ಅವರು ಹಿಂತಿರುಗುವುದಿಲ್ಲ. ಅವರಂತಹ ಆಟಗಾರರು ಅನೇಕ ತಲೆಮಾರುಗಳ ನಂತರ ಬರುತ್ತಾರೆ. ಧೋನಿ ಅವರನ್ನು ನಾನು ಗಮನಿಸಿದ ಪ್ರಕಾರ ಅವರು ಇನ್ನೂ ಭಾರತೀಯ ಕ್ರಿಕೆಟ್‍ಗೆ ಸಾಕಷ್ಟು ಕೊಡುಗೆ ನೀಡಬಲ್ಲರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Advertisement
Advertisement
ಧೋನಿ ಒಂದು ಅಥವಾ ಎರಡು ಬಾರಿ ಗುರಿಯನ್ನು ಬೆನ್ನಟ್ಟಲಿಲ್ಲ ಎಂಬುದು ನಿಜ. ವಿಶೇಷವಾಗಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾಗೆ ಆಗಿದೆ. ಆದರೆ ಅವರಿಗೆ ಇನ್ನೂ ಪ್ರತಿಭೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಕೇಳಿಕೊಂಡರು.
Advertisement
ಇಷ್ಟು ಸುದೀರ್ಘ ವಿರಾಮದ ನಂತರ ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳುವುದು ಸುಲಭವಲ್ಲ ಎಂದು ಸುನಿಲ್ ಗವಾಸ್ಕರ್, ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್ ಅವರಂತಹ ಅನೇಕ ಟೀಂ ಇಂಡಿಯಾದ ಪ್ರಮುಖ ಮಾಜಿ ಆಟಗಾರರು ಹೇಳಿದ್ದಾರೆ. ಆದರೆ 1999ರಿಂದ 2003ರವರೆಗೆ ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಹುಸೇನ್ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Advertisement
ಎಂ.ಎಸ್.ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ. ಇದು ಪ್ರತಿಯೊಬ್ಬ ಆಟಗಾರನಿಗೂ ಅನ್ವಯಿಸುತ್ತದೆ. ಧೋನಿಗೆ ಅವರ ಮಾನಸಿಕ ಸ್ಥಿತಿಯ ಅರಿವಿದೆ ಮತ್ತು ಅಂತಿಮವಾಗಿ ಆಯ್ಕೆದಾರರು ಅವರನ್ನು ಕೈಬಿಡಬಾರದು ಎಂದು ಹುಸೇನ್ ಹೇಳಿದ್ದಾರೆ.
ಧೋನಿ ಕಮ್‍ಬ್ಯಾಕ್‍ಗೆ ಐಪಿಎಲ್ ಹೊಡೆತ:
ಧೋನಿ ಕಳೆದ ವರ್ಷ ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿತ್ತು. ಅಂದಿನಿಂದ ಧೋನಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ಅವರನ್ನು ಒಪ್ಪಂದದ ಪಟ್ಟಿಯಿಂದ ಕೈಬಿಟ್ಟಿತ್ತು. ಅಂದಿನಿಂದ ಅವರ ನಿವೃತ್ತಿಯ ಬಗ್ಗೆ ಉಹಾಪೋಹಗಳು ಕೇಳಿ ಬಂದಿದ್ದವು. ಅದೇ ಸಮಯದಲ್ಲಿ ಎಂಎಸ್‍ಡಿ ಮರಳುವ ಏಕೈಕ ದಾರಿಯೆಂದರೆ ಐಪಿಎಲ್ ಆಗಿತ್ತು. ಆದರೆ ಅದು ಕೂಡ ಕೊರೊನಾ ವೈರಸ್‍ನಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ. ಬಿಸಿಸಿಐ ಈಗಾಗಲೇ ಏಪ್ರಿಲ್ 15 ರವರೆಗೆ ಮುಂದೂಡಿದೆ. ಈಗ ಏ.30ರವರೆಗೆ ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ಐಪಿಎಲ್ ನಡೆಯುವುದು ಅನುಮಾನ.
ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಧೋನಿ ತಂಡಕ್ಕೆ ಮರಳುವುದು ಐಪಿಎಲ್‍ನಲ್ಲಿ ಅವರು ತೋರುವ ಪ್ರದರ್ಶನದ ಮೇಲೆ ಮಾತ್ರ ನಿರ್ಧಾರವಾಗುತ್ತದೆ ಎಂದು ಹೇಳಿದ್ದರು.