ಮೈಸೂರು: ಟಿಪ್ಪು ಜಯಂತಿ ಆಚರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ನವೆಂಬರ್ 9 ರಂದು ಇಡೀ ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ನಡೆಸಲಾಗುತ್ತದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನವೆಂಬರ್ 9 ರಂದು ಪ್ರತಿಭಟನೆ ಮಾಡುತ್ತೇವೆ. ಧಮ್ ಇದ್ದರೇ ಬಂದು ಬಂಧಿಸಿ. ನಿಮ್ಮ ಯಾವುದೇ ಗೊಡ್ಡು ಬೆದರಿಕೆಗೆ ಬೆದರಲ್ಲ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೇ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಆದರೆ ಅದಕ್ಕೆ ಸರ್ಕಾರವೇ ನೇರ ಕಾರಣ. ನೀವೇ ಈ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಕೆಎಫ್‍ಡಿ, ಪಿಎಫ್‍ಐ ಇಂತಹ ಸಂಘಟನೆಗಳ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಬರುತ್ತಾರೆ. ಇವರು ಮಾಡುವಂತಹ ಅನಾಹುತಕ್ಕೆ ಸರ್ಕಾರವೇ ನೇರವಾಗಿ ಕಾರಣವಾಗುತ್ತದೆ. ಸರ್ಕಾರ ಈ ಸಂಘಟನೆಗಳ ಪರವಾಗಿ ಬಹಳ ಮೃದು ಧೋರಣೆಯನ್ನು ತಳೆದಿದೆ. ಅವರ ಮೇಲಿದ್ದ ಕೇಸ್‍ಗಳನ್ನು ವಾಪಸ್ ಪಡೆಯುವ ಮುಖಾಂತರ ಸರ್ಕಾರ ಅವರಿಗೆ ಉತ್ತೇಜನ ನೀಡುತ್ತಿದೆ. ಈ ದೃಷ್ಟಿಯಿಂದ ನಾವು ನವೆಂಬರ್ 9 ರಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಇವತ್ತು ರಾಜ್ಯ ಸರ್ಕಾರ ಸುದ್ದಿಗೋಷ್ಠಿಯನ್ನು ಕರೆದು ಯಾರಾದರೂ ಟಿಪ್ಪು ವಿರುದ್ಧವಾಗಿ ಮಾತನಾಡಿದರೆ ಅವರನ್ನ ಜೈಲಿಗೆ ಹಾಕುತ್ತೇನೆ ಎಂದು ಹೇಳಿದೆ. ವಾಟ್ಸಾಪ್, ಫೇಸ್‍ಬುಕ್ ಸೋಶಿಯಲ್ ಮೀಡಿಯಾದಲ್ಲಿ ನೀವೇನಾದರೂ ವಿರುದ್ಧವಾಗಿ ಹಾಕಿದರೆ ನಿಮ್ಮನ್ನ ಜೈಲಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಲಕ್ಷಾಂತರ ಪತ್ರಕರ್ತರನ್ನು ಜೈಲಿಗೆ ಕಳುಹಿಸಿದ್ದರು. ಈ ರೀತಿ ಆಡಳಿತ ಮತ್ತೆ ಕರ್ನಾಟಕಕ್ಕೆ ಬರುತ್ತಿದೆಯಾ? ಹಿಟ್ಲರ್ ವ್ಯವಸ್ಥೆಯಲ್ಲಿದೆಯಾ, ಸ್ವಾತಂತ್ರ್ಯ ಇಲ್ಲವೇ? ಕಾಂಗ್ರೆಸಿನ ಗುಂಡಾಗಿರಿ ಜೆಡಿಎಸ್‍ನ ಗುಂಡಾಗಿರಿ ಬಹಳ ದಿನಗಳು ನಡೆಯುವುದಿಲ್ಲ ಎಂದು ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಟಿಪ್ಪು ಜಯಂತಿಯಂದು ಕೇರಳದ ಬೇರೆ ಬೇರೆ ಜಾಗಗಳಿಂದ ಕರ್ನಾಟಕಕ್ಕೆ ಸುಮಾರು 5 ಸಾವಿರ ಜನರು ಬಂದಿದ್ದರು ಅಂತ ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಈ ಬಾರಿಯೂ ಆ ರೀತಿಯ ಜನ ಬಂದು ದಾಂಧಲೆ ಮಾಡಿ ಹೋಗುವಂತಹ ಸಂಶಯ ಕಾಡುತ್ತಿದೆ. ವಿಶೇಷವಾಗಿ ಕೇರಳದಿಂದ ಬರುವ ಜಿಹಾದಿಗಳು ಈ ಬಾರಿಯೂ ಬಂದು ಕೋಮುಗಲಭೆಯನ್ನು ಅಂಟಿಸುವಂತಹ ಪಿತೂರಿ ನಡೆಸುತ್ತಿವೆ. ಸರ್ಕಾರ ಅದನ್ನು ತಡೆಗಟ್ಟುವುದನ್ನು ಬಿಟ್ಟು ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡುತ್ತಿದೆ. ಈಗಾಗಲೇ ರೈತರ ಸಾಲವನ್ನು ಮನ್ನ ಮಾಡುವುದಕ್ಕೆ ಹಣವಿಲ್ಲ. ಸರ್ಕಾರ ಬಂದು 5 ತಿಂಗಳಾದರೂ ಟೆಕ್ ಆಫ್ ಆಗಿಲ್ಲ ಹಾಗೂ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಇಷ್ಟೆಲ್ಲ ಹಣದ ಕೊರತೆಗಳಿದ್ದರೂ ಯಾರ ಮೂಗಿಗೆ ತುಪ್ಪ ಸವರಲು ನೀವು ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv