ಬೆಂಗಳೂರು: ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಬಹಿರಂಗಪಡಿಸದೇ ಬರೋಬ್ಬರಿ 103 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡ್ಮೂರು ದಿನಗಳಿಂದ ನಡೆಸಿದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಪರಮೇಶ್ವರ್ ಅವರು 100 ಕೋಟಿ ರೂ. ದಾಖಲೆ ಪತ್ರಗಳಿಗೆ ಯಾವುದೇ ಉತ್ತರ ನೀಡಿಲ್ಲ. ಈ ಮೂಲಕ ಕಾಲೇಜಿನಲ್ಲಿ ದುಡಿದ ಹಣವನ್ನು ಪಂಚತಾರಾ ಹೋಟೆಲ್ ಉದ್ಯಮದ ಮೇಲೆ ಹೂಡಿಕೆ ಮಾಡಿದ್ದು ಸಾಬೀತಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
Advertisement
ಸಿದ್ಧಾರ್ಥ್ ಮೆಡಿಕಲ್ ಕಾಲೇಜಿನ 8 ಜನ ಸಿಬ್ಬಂದಿಗೆ ಗೊತ್ತಾಗದಂತೆ ಅವರ ಹೆಸರಲ್ಲಿ ವಿವಿಧ ಪಂಚತಾರಾ ಹೋಟೆಲ್‍ಗಳ ಮೇಲೆ 4.6 ಕೋಟಿ ಹೂಡಿಕೆ ಮಾಡಲಾಗಿದೆ. ಎರಡು ದಿನದ ದಾಳಿಯಲ್ಲಿ ಆರ್.ಎಲ್.ಜಾಲಪ್ಪ ಹಾಗೂ ಪರಮೇಶ್ವರ್ ಮನೆ ಸೇರಿದಂತೆ 4.52 ಕೋಟಿ ರೂ. ಪತ್ತೆಯಾಗಿದೆ ಎಂಬ ಹೇಳಲಾಗುತ್ತಿದೆ.
Advertisement
Advertisement
ಕೋಟಿ ಕೋಟಿ ತೆರಿಗೆ ವಂಚನೆ ಆರೋಪ ಸಂಬಂಧ ಸತತ ಎರಡನೇ ದಿನವೂ ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಮನೆ, ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ನಡೆದಿದೆ. ಜಿ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಹಾಗೂ ಸಹೋದರನ ಪುತ್ರ ಆನಂದ್ ಸಿದ್ಧಾರ್ಥ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ 120ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Advertisement
ಪರಮೇಶ್ವರ್ ಮನೆಯ ಲಾಕರ್ ಓಪನ್ ಆಗದ ಹಿನ್ನೆಲೆಯಲ್ಲಿ ಕೀ ಮೇಕರ್ ಗಳನ್ನು ಕರೆಸಿ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಹಾಗೂ ಹಲವು ದಾಖಲೆಗಳನ್ನೂ ಕೂಡ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಶೋಧ ಕಾರ್ಯ ಮುಂದುವರಿಸಿದ ಐಟಿ ಅಧಿಕಾರಿಗಳು, ಪರಮೇಶ್ವರ್ ಅವರಿಗೆ ಸೇರಿದ ಬೆಂಗಳೂರಿನ ಸದಾಶಿವನಗರದ ಮನೆ, ತುಮಕೂರು, ನೆಲಮಂಗಲ, ಟಿ.ಬೇಗೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶೋಧ ನಡೆಸಿದ್ದಾರೆ.
ದಾಳಿಯ ವೇಳೆ ಸಿಕ್ಕ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ್ದ ದಾಖಲೆಗಳನ್ನೇ ಆಧರಿಸಿ ಹೆಚ್ಚುವರಿ ಆಯುಕ್ತೆ ನಿಶಿ ಪದ್ಮ ವಿಚಾರಣೆ ನಡೆಸುತ್ತಿದ್ದಾರೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಬಳಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸೀಟು ಹಂಚಿಕೆಯಲ್ಲಿ ಸಿಕ್ಕ ಹಣವನ್ನು ಸಿನಿಮಾಗಳ ಮೇಲೆ ಹೂಡಿಕೆ ಮಾಡಿರುವುದು ಕೂಡ ಪತ್ತೆಯಾಗಿದೆ. ಕಾರ್ಪೋರೇಟ್ ಸಂಸ್ಥೆಗಳಲ್ಲೂ ಹಣ ಹೂಡಿಕೆಯಾಗಿದ್ದು, ಮತ್ತೆ ಸೋಮವಾರ ವಿಚಾರಣೆ ಬರುವಂತೆ ಐಟಿ ಸಮನ್ಸ್ ಕೊಟ್ಟಿದೆ ಎಂಬ ಮಾಹಿತಿ ಲಭಿಸಿದೆ.
ಪರಮೇಶ್ವರ್ ಆಪ್ತಸಹಾಯಕ ರಮೇಶ್ ಅವರನ್ನು ಕೂಡ ವಿಚಾರಣೆ ಮಾಡಲಾಗಿದೆ. ಈ ನಡುವೆ ಪರಮೇಶ್ವರ್ ಭೇಟಿಗೆ ಬಂದ ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ಅವಕಾಶ ನಿರಾಕರಿಸಲಾಯಿತು. ಅಭಿಮಾನಿಗಳು ದೇವರ ಪ್ರಸಾದ ಹೊತ್ತು ತಂದಿದ್ದರು. ಪರಮೇಶ್ವರ್ ಅಭಿಮಾನಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಐಟಿ ಶೋಧ, ವಿಚಾರಣೆ ಮುಗಿದಿಲ್ಲ. ನಾಳೆಯೂ ಪರಮೇಶ್ವರ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ, ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ನೆಲಮಂಗಲದಲ್ಲಿಯೇ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಸೇರಿದ 150 ಎಕರೆ ಜಮೀನು ಇದೆ ಎಂದು ಹೇಳಲಾಗುತ್ತಿದೆ. 15 ದಿನಗಳ ಹಿಂದೆಯಷ್ಟೇ ಪರಮೇಶ್ವರ್ ನೆಲಮಂಗಲದ ಬೇಗೂರಲ್ಲಿ 3 ಎಕರೆ ಭೂಮಿ ಖರೀದಿಸಿದ್ದರು. ಭೂ ವ್ಯಾಜ್ಯವಿದ್ದರೂ ಮುನಿರಾಮಯ್ಯ ಅವರ ಆಸ್ತಿಯನ್ನ ಪರಮೇಶ್ವರ್ ಖರೀದಿಸಿದ್ದರು. ಭೂಮಿಯನ್ನ ನನಗೆ ಮಾರು. ನಿನ್ನ ಅಣ್ಣ-ತಮ್ಮಂದಿರ ಜೊತೆಗೆ ನಾನೇ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಅಂತ ಪರಮೇಶ್ವರ್ ಹೇಳಿದ್ದರು. ಈ ವ್ಯವಹಾರದ ಭಾಗವಾಗಿ 2 ಕೋಟಿ ರೂಪಾಯಿ ಹಾರ್ಡ್ ಕ್ಯಾಶ್ ಮತ್ತು 3 ಕೋಟಿ ರೂಪಾಯಿ ಚೆಕ್‍ನ್ನ ಮುನಿರಾಮಯ್ಯ ಅವರಿಗೆ ಕೊಟ್ಟಿದ್ದರು. ಆದರೆ ಗುರುವಾರ ನಡೆದ ಐಟಿ ದಾಳಿ ವೇಳೆ ಮುನಿರಾಮಯ್ಯ ಬಳಿ ಇದ್ದ 1 ಕೋಟಿ 60 ಲಕ್ಷ ರೂಪಾಯಿಯನ್ನ ಐಟಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸೋಮವಾರ ವಿಚಾರಣೆಗೆ ಬರುವಂತೆ ಮುನಿರಾಮಯ್ಯ ಅವರಿಗೆ ಐಟಿ ಸಮನ್ಸ್ ನೀಡಿದೆ. ಇದಲ್ಲದೇ, ಕನ್ನಿಂಗ್ ಹ್ಯಾಮ್ ರೋಡ್‍ನಲ್ಲಿರುವ ಕಾವೇರಿ ಕಾಂಟಿನೆಂಟಲ್ ಹೋಟೆಲನ್ನು ಬೇರೊಬ್ಬರ ಹೆಸರಿನಲ್ಲಿ ಪರಮೇಶ್ವರ್ ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.