ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿ ವೀಡಿಯೋ ಸಂದೇಶ ಕಳುಹಿಸಿದ್ದಾರೆ.
ವೀಡಿಯೋ ಸಂದೇಶದಲ್ಲೇನಿದೆ?
ನಮಸ್ಕಾರ, ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಬಹುಮತ ನೀಡಿರುವ ಕರ್ನಾಟಕ ರಾಜ್ಯದ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ಬಹುಮತ ಜನಪರ ಸರ್ಕಾರಕ್ಕಾಗಿ, ಈ ಬಹುಮತ ಬಡವರ ಪರವಾದ ಸರ್ಕಾರಕ್ಕಾಗಿ. ಇದು ವಿಭಜನೆ ರಾಜಕೀಯ ಹಾಗೂ ಭ್ರಷ್ಟಾಚಾರವನ್ನು ತಿರಸ್ಕರಿಸುವ ಜನಾದೇಶವಾಗಿದೆ. ಇದನ್ನೂ ಓದಿ: ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ
ಇಂದು ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಮೊದಲ ಸಚಿವ ಸಂಪುಟದಲ್ಲಿ ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿರುವುದು ಹೆಮ್ಮೆಯ ವಿಚಾರ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಹಾಗೂ ಪ್ರಗತಿ ಸಾಧಿಸಲು ಬದ್ಧವಾಗಿದೆ ಎಂದು ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ವಿರೋಧಿ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು. ಇದನ್ನೂ ಓದಿ: ಸಿಎಂ, ಡಿಸಿಎಂ ಜೊತೆ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ