Bengaluru CityDistrictsKarnatakaLatest

ಮಾಜಿ ಶಾಸಕ ನೆಲ ನರೇಂದ್ರ ಬಾಬು, ಕಿರುತೆರೆ ನಟಿಯರು ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಮಾಜಿ ಶಾಸಕ ನೆಲ ನರೇಂದ್ರ ಬಾಬು ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಬಾಬು ಅವರಿಗೆ ಬಾವುಟ ನೀಡಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಅವರ ಜೊತೆಯಲ್ಲಿ ಕಿರುತೆರೆ ನಟಿಯರಾದ ಜ್ಯೋತಿ, ಆಶಾಲತಾ, ಸಂಗೀತಾ ಅವರೂ ಬಿಜೆಪಿ ಸೇರಿಕೊಂಡರು.

ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನರೇಂದ್ರ ಬಾಬು ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಪಕ್ಷ ನನ್ನನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್ ನಿರ್ಲಕ್ಷ್ಯ ಧೋರಣೆಯಿಂದ ನನಗೆ ನೋವಾಗಿದೆ. ಕುತಂತ್ರ ಬುದ್ದಿ ಹಾಗೂ ಪಕ್ಷ ದ್ರೋಹಿಗಳಿಗೆ ಬೆಲೆಯಿದೆ ಹೊರತು ನನ್ನಂತಹ ನಿಷ್ಠಾವಂತ, ಪ್ರಾಮಾಣಿಕರಿಗೆ ಬೆಲೆಯಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ತಿಳಿಸಿದ್ದರು.

ಪಕ್ಷದಲ್ಲಿ 35 ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೂರು ಬಾರಿ ಕಾರ್ಪೊರೇಟರ್, ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿರುವ ನನ್ನನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಹೇಳಿದರು.

ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್ ಅಶೋಕ್, ಬಿಜೆಪಿ ಉಪಾಧ್ಯಕ್ಷ ಕೆಪಿ ನಂಜುಂಡಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿಯ ಗಾಳಿ ಕರ್ನಾಟಕದ ಉದ್ದಗಲಕ್ಕೆ ಬೀಸುತ್ತಿದೆ. ರಾಮಕೃಷ್ಣ ಹೆಗ್ಡೆಯವರ ಕಾಲದಲ್ಲಿ ಪಕ್ಷದಲ್ಲಿದ್ದ ನರೇಂದ್ರ ಬಾಬು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಆದರೆ ಮರಳಿ ಬಿಜೆಪಿಗೆ ಪಕ್ಷಕ್ಕೆ ಆಗಮಿಸಿರುವುದಕ್ಕೆ ಸ್ವಾಗತ ಕೋರುತ್ತೇನೆ. ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಪ್ರಧಾನಿ ಕಾರ್ಯಕ್ರಮದ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಪರ್ಯಾಯವಾಗಿ, ಸಿಎಂ ಸಿದ್ದರಾಮಯ್ಯ ಕಾಮ್ ಕಿ ಬಾತ್ ಮಾಡ್ತಿರುವುದು ಮೂರ್ಖತನದ ಪರಮಾವಧಿ ಎಂದು ವಗ್ವಾದ ನಡೆಸಿದರು.

ಸಚಿವ ಹೆಚ್ ಆಂಜನೇಯ ಆಯುಧ ಪೂಜೆ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಸಂಪ್ರದಾಯ, ಧರ್ಮಾಚರಣೆಗೆ ಅಪಮಾನ ಮಾಡಿದ್ದಾರೆ. ದುರಂಹಕಾರ ದರ್ಪದಿಂದ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು, ರಾಜ್ಯದಲ್ಲಿ ಬಿಜೆಪಿ ಅಧಿಕಾರ ತರುತ್ತೇವೆಂದು ಯಡಿಯೂರಪ್ಪ ತಿಳಿಸಿದರು.

ನರೇಂದ್ರ ಬಾಬು ಮಾತನಾಡಿ, ಕೇಂದ್ರ ಸರ್ಕಾರ ಗಾಂಧಿ ತತ್ವಗಳನ್ನು ಜಾರಿಗೊಳಿಸುತ್ತಿದೆ. ನನ್ನನ್ನು ಕಾಯ ವಾಚ ಮನಸ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ತಿಳಿಸಿದರು.

ಬೈಕ್ ರ್ಯಾಲಿ: ನವೆಂಬರ್ 2 ರಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಬೆಂಗಳೂರು ಮತ್ತು ಹುಬ್ಬಳ್ಳಿಗೆ ಬೃಹತ್ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಯಿತು. ನವಕರ್ನಾಟಕ ಪರಿವರ್ತನಾ ಯಾತ್ರೆ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವ ರೀತಿ ಬಗ್ಗೆಯೂ ಚರ್ಚಿಸಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.

ನವ ಕರ್ನಾಟಕ ಪರಿವರ್ತನಾ ಯಾತ್ರೆ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆ ವಿಚಾರವಾಗಿ, ಬಿಜೆಪಿ ಕಚೇರಿಯಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ತಂಡಗಳ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ,  ಬಿ.ಸೋಮಶೇಖರ್, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *