Bengaluru CityDistrictsKarnatakaLatest

1 ವಿಕೆಟ್ ಉರುಳಿಸಿದ ಬಳಿಕ ಮೂರು ವಿಕೆಟ್ ಬೀಳಿಸಲು ತಂತ್ರ!

ಬೆಂಗಳೂರು: ಲೋಕಸಭಾ ಚುನಾವಣೆಗೂ ಮೊದಲೇ ಕರ್ನಾಟಕದಲ್ಲಿ ರಾಜಕೀಯ ಕ್ರಾಂತಿ ಶುರುವಾಗಿದ್ದು, ಈಗಾಗಲೇ ಒಂದು ವಿಕೆಟ್ ಉರುಳಿಸಿ ಆಗಿದೆ. ಇನ್ನೂ ಮೂರು ವಿಕೆಟ್ ಬೀಳಿಸಲು ತಮ್ಮ ಭಂಟನ ಮೂಲಕ ಸದ್ದಿಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ `ಆಪರೇಷನ್’ ಕಸರತ್ತು ಮಾಡುತ್ತಿದ್ದಾರೆ.

ಬಿಎಸ್‍ವೈ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರನ್ನು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನಲ್ಲಿರುವ ರಮೇಶ್ ಜಾರಕಿಹೊಳಿ ಮನೆಯಲ್ಲಿಯೇ ಭೇಟಿ ನೀಡಿ ಬರೋಬ್ಬರಿ ಒಂದೂವರೆ ಗಂಟೆ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿ ರಾಜೀನಾಮೆಯ ಸುಳಿವು ಬೆನ್ನಲ್ಲೇ ಅವರ ಮನವೊಲಿಸಲು ಕುಮಾರಸ್ವಾಮಿ ದಿಢೀರ್ ಮಾತುಕತೆ ನಡೆಸಿದ್ದರು. ಆದಾದ ಬಳಿಕ ಸ್ಪೀಕರ್ ಅವರಿಂದ ನಾಲ್ವರು ಅತೃಪ್ತ ನಾಯಕರಿಗೆ ಸಭೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿತ್ತು. ಸ್ಪೀಕರ್ ನೋಟಿಸ್ ಕೊಟ್ಟ ಬೆನ್ನಲ್ಲೇ ಬಿಜೆಪಿಯಿಂದ ಮಾತುಕತೆ ನಡೆಯುತ್ತಿದೆ.

ರಮೇಶ್ ಜಾರಕಿಹೊಳಿ ತಂಡ ಸೆಳೆಯಲು ಬಿಜೆಪಿಯಿಂದ ಕಸರತ್ತು ಮುಂದುವರಿದಿದ್ದು, ಇವತ್ತು ಸಹ ರಮೇಶ್ ಜಾರಕಿಹೊಳಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿಯ ಪ್ರಮುಖ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರಿಂದ ರಮೇಶ್ ಜಾರಕಿಹೊಳಿ ಭೇಟಿ ಮಾಡಿಸಲಾಗಿದೆ. ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಮನೆಯಲ್ಲಿ ಮಹತ್ವದ ಮಾತುಕತೆ ನಡೆದಿದ್ದು, ರಮೇಶ್ ಜಾರಕಿಹೊಳಿ ಮನೆಯಲ್ಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ಹಾಜರಾಗಿದ್ದರು.

ಯಡಿಯೂರಪ್ಪ ಅವರು ಕಾಂಗ್ರೆಸ್ ಅತೃಪ್ತರಿಗೆ ಹೊಸ ಆಫರ್ ಕೊಟ್ಟಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿಗೆ ಟಿಕೆಟ್ ಆಫರ್ ಮಾಡಿದ್ದಾರೆ. ಯಡಿಯೂರಪ್ಪ ದೆಹಲಿಯಲ್ಲಿ ಕೂತೇ ಶಿವನಗೌಡ ನಾಯಕ್ ಮೂಲಕ ಮಾತುಕತೆಗೆ ಸ್ಕೆಚ್ ಹಾಕಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಮೇಶ್ ಜಾರಕಿಹೊಳಿ ಜೊತೆ ಶಿವನಗೌಡ ನಾಯಕ್ ಚರ್ಚೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ಮುಗಿಸಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಯಾವುದೇ ಪ್ರತಿಕ್ರಿಯೆ ಕೊಡದೇ ಕಾರೊಳಗೆ ಕೂತು ಮುಖ ಆಕಡೆ ತಿರುಗಿಸಿಕೊಂಡು ಹೊರಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button