ಬಾಗಲಕೋಟೆ: ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾದ ಮೇಲೆ ಒಮ್ಮೆಯೂ ಕ್ಷೇತ್ರಕ್ಕೆ ಬಾರದ ಹಿನ್ನೆಲೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸದ್ಯ ಆ ಎಲ್ಲ ಟೀಕೆಗಳಿಗೆ ತೆರೆ ಎಳೆಯಲು ಇಂದಿನಿಂದ ಐದು ದಿನಗಳ ಕಾಲ ಬಾದಾಮಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಐದು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದು, ಪ್ರತಿ ದಿನ ಇಂತಿಷ್ಟು ಗ್ರಾಮ ಪಂಚಾಯತಿಗಳಂತೆ ಒಟ್ಟು 38 ಗ್ರಾಮ ಪಂಚಾಯತ್, ಒಂದು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸೋದರ ಜೊತೆಗೆ ಜನರ ಅಹವಾಲು ಆಲಿಸಲಿದ್ದಾರೆ.
Advertisement
Advertisement
ಇಂದು ಬೆಳಗ್ಗೆ 11 ಗಂಟೆಗೆ ಬದಾಮಿಗೆ ಆಗಮಿಸಲಿರುವ ಸಿದ್ದರಾಮಯ್ಯ 12 ಗಂಟೆಗೆ ಬನಶಂಕರಿ ದೇವಿ ದರ್ಶನ ಪಡೆಯುತ್ತಾರೆ. ನಂತರ ಕ್ಷೇತ್ರದ ಜಮ್ಮನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ರಾಜಪ್ಪ ಜಲಗೇರಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ರಾತ್ರಿ ಕೃಷ್ಣಾ ಹೆರಿಟೇಜ್ ರೆಸಾರ್ಟ್ ನಲ್ಲಿ ನಾಲ್ಕು ದಿನ ತಂಗಲಿದ್ದಾರೆ.
Advertisement
ಜೂನ್ 11 ರಂದು ಬದಾಮಿ ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಸಂಜೆ ಐದು ಗಂಟೆಗೆ ಅಂಜುಮನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುವ ಇಫ್ತಾರ್ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯರಿಗೆ ಸ್ಥಳೀಯ ಮುಖಂಡರಾದ ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ, ಕಾಂಗ್ರೆಸ್ ಮುಖಂಡ ದೇವರಾಜ ಪಾಟಿಲ್ ಸೇರಿದಂತೆ ಇತರೆ ಮುಖಂಡರು ಸಾಥ್ ನೀಡಲಿದ್ದಾರೆ.