ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯರ ನಿವಾಸಕ್ಕೆ ತೆರಳಿದ ನೂತನ ಗೃಹ ಸಚಿವ ಎಂ.ಬಿ.ಪಾಟೀಲ್ ತಮ್ಮ ನಾಯಕನಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿವಾಸಕ್ಕೆ ಬಂದ ಪಾಟೀಲರನ್ನು ಬರಮಾಡಿಕೊಂಡ ಮಾಜಿ ಸಿಎಂ ಕೈ ಕುಲುಕಿ ಗೃಹ ಸಚಿವರಿಗೆ ಶುಭಕೋರಿದರು.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಬಳಿಯಿದ್ದ ಗೃಹ ಖಾತೆಯನ್ನು ತಪ್ಪಿಸಿ ತಮ್ಮ ಬಣದ ಸದಸ್ಯ ಎಂ.ಬಿ.ಪಾಟೀಲ್ ಅವರಿಗೆ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಪಕ್ಷದಲ್ಲಿ ಮತ್ತೆ ಬಲ ಪ್ರದರ್ಶನ ಮಾಡಿ, ಮೂಲ ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟಿದ್ದಾರೆ. ವಿಧಾನ ಪರಿಷತ್ ಸಭಾಪತಿ ಆಯ್ಕೆಯ ರಿವೇಂಜ್ ಅನ್ನು ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿ ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದರು. ಆದರೆ ಮೂಲ ಕಾಂಗ್ರೆಸ್ಸಿಗರಾದ ಸಚಿವ ಡಿ.ಕೆ.ಶಿವಕುಮಾರ್ ಬಣವು ಪ್ರತಾಪ್ ಚಂದ್ರಶೆಟ್ಟಿ ಅವರನ್ನು ಆಯ್ಕೆ ಮಾಡಿತ್ತು. ಇದರಿಂದಾಗಿ ಸಿದ್ದರಾಮಯ್ಯ ಅವರು ಮಲೇಷಿಯಾ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಬಳಿಕ ನಡೆದ ಸಚಿವ ಸಂಪುಟದಲ್ಲಿ ಪ್ಲಾನ್ ಮಾಡಿ ಗೃಹ ಖಾತೆಯನ್ನು ಪರಮೇಶ್ವರ್ ಅವರ ಕೈತಪ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಗೃಹ ಖಾತೆ ಅಧಿಕಾರ ಸ್ವೀಕರಿಸಿದ ಎಂ.ಬಿ.ಪಾಟೀಲ್ ಅವರು, ಝೀರೋ ಟ್ರಾಫಿಕ್ ಸೌಲಭ್ಯ ಬೇಡ. ಸಿಗ್ನಲ್ ಫ್ರೀ ಕೊಟ್ಟರೆ ಸಾಕು ಎಂದು ಹೇಳುವ ಮೂಲಕ ಜಿ.ಪರಮೇಶ್ವರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಬಣ ಮತ್ತಷ್ಟು ಬಲಿಷ್ಠವಾಗುತ್ತಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv