ನವದೆಹಲಿ: ರಾಜ್ಯದಲ್ಲಿ ಈಗ ದೂರು ಪ್ರತಿದೂರಿನ ರಾಜಕೀಯ ಆರಂಭವಾಗಿದೆ. ಮೈತ್ರಿ ಸರ್ಕಾರದ ಮುನಿಸು ಕಾಂಗ್ರೆಸ್ ಹೈಕಮಾಂಡ್ ಬಾಗಿಲು ತಟ್ಟುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ದೂರು ಕೊಟ್ಟ ಬೆನ್ನೆಲ್ಲೇ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನ ಭೇಟಿ ಆಗುತ್ತಿದ್ದಾರೆ.
ಕಳೆದ ವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಯಾವ ಸುಳಿವನ್ನೂ ಕೊಡದೆ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ್ದರು. ಗೌಪ್ಯವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದರು ಎನ್ನಲಾಗಿತ್ತು. ರಾಜ್ಯದ ಮೈತ್ರಿ ಸರ್ಕಾರದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆಗಳು ಹಾಗೂ ಸಿದ್ದರಾಮಯ್ಯ ನಡೆಗಳನ್ನು ರಾಹುಲ್ ಗಾಂಧಿ ಮುಂದೆ ವಿರೋಧಿಸಿದ್ದಲ್ಲದೇ ಅವರ ಓಟಕ್ಕೆ ಬ್ರೇಕ್ ಹಾಕುವಂತೆ ಮನವಿ ಕೂಡ ಮಾಡಿದ್ದರು ಎಂದು ಹೇಳಲಾಗಿತ್ತು.
Advertisement
Advertisement
ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ದೆಹಲಿಗೆ ದಿಢೀರ್ ಆಗಮಿಸಿದ್ದು, ಇಂದು ರಾಹುಲ್ ಗಾಂಧಿ ಅವರನ್ನ ಭೇಟಿ ಆಗಲಿದ್ದಾರೆ. ರಾಹುಲ್ ಜೊತೆಗೆ ಪಕ್ಷದ ವರಿಷ್ಠರಾದ ಅಹ್ಮದ್ ಪಟೇಲ್, ಗುಲಾಂನಭೀ ಅಜಾದ್, ಎ.ಕೆ ಆಂಟನಿ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನು ಕೂಡ ಭೇಟಿ ಮಾಡಲಿದ್ದು ಮೂಲಗಳ ಪ್ರಕಾರ ಜೆಡಿಎಸ್ ಗ್ಯಾಂಗ್ ಮೇಲೆ ಪ್ರತಿದೂರು ದಾಖಲಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
Advertisement
ಮೈತ್ರಿ ವಿಷಯ ಅಥವಾ ಸರ್ಕಾರದ ಆಡಳಿತಾತ್ಮಕ ವಿಷಯ ಯಾವುದೇ ಇರಬಹುದು. ನಾವು ಜೆಡಿಎಸ್ ಪಕ್ಷವನ್ನು ಮತ್ತು ನಾಯಕರನ್ನು ನಿಯಂತ್ರಿಸದಿದ್ದರೆ ಅವರೇ ನಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದುದರಿಂದ ನಾವು ಸದಾ ಜೆಡಿಎಸ್ ಪಕ್ಷದ ವಿರುದ್ಧ ಮೇಲುಗೈ ಸಾಧಿಸಲೇಬೇಕು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ರಾಜಕಾರಣದ ದೃಷ್ಟಿಯಿಂದ ಮೈತ್ರಿ ಅನಿವಾರ್ಯ ಎಂಬ ಸಂಗತಿಯನ್ನು ಜೆಡಿಎಸ್ ನಾಯಕರು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.
Advertisement
ಒಟ್ಟಿನಲ್ಲಿ ಸಿಎಂ ಆಗಿದ್ದಾಗಲೇ ಮೂರು ದಿನ ದೆಹಲಿಯಲ್ಲಿ ಉಳಿಯದ ಸಿದ್ದರಾಮಯ್ಯ ಈಗ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು ದೊಸ್ತಿ ನಾಯಕರ ವಿರುದ್ಧ ಅದ್ಯಾವ ಅಸ್ತ್ರ ಬಿಡಲಿದ್ದಾರೋ ಕಾದು ನೋಡಬೇಕು.