ಬೆಂಗಳೂರು/ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಭವಿಷ್ಯ 2 ಕ್ಷೇತ್ರಗಳ ಫಲಿತಾಂಶದ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಫಲಿತಾಂಶ ಮೈತ್ರಿ ಪರವಾದ್ರೆ ಮಾತ್ರ ಸರ್ಕಾರಕ್ಕೆ ಭವಿಷ್ಯವಿದೆ. ಸ್ಪರ್ಧೆ ಮಾಡಿದ ಜೆಡಿಎಸ್‍ಗಿಂತ ಬೆಂಬಲ ನೀಡಿದ ಕಾಂಗ್ರೆಸ್ ಅಲ್ಲಿ ಗೆಲ್ಲಬೇಕಿದೆ. ಹೀಗಾಗಿ ಕೈ ಹೈಕಮಾಂಡ್ 2 ಕ್ಷೇತ್ರಗಳ ಬಗ್ಗೆ ಇನ್ನಿಲ್ಲದ ಆಸಕ್ತಿ ವಹಿಸಿದೆ. ಆ ಎರಡೂ ಕ್ಷೇತ್ರಗಳ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹೈಕಮಾಂಡ್ ಹಾಕಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಿ ಎಂದು ಮಂಡ್ಯ ನಾಯಕರಿಗೆ ಸಿದ್ದರಾಮಯ್ಯ ಖಡಕ್ ಆಗಿ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳು ತಿಳಿಸಿವೆ.
Advertisement
Advertisement
ಗೌಡರ ಮೊಮ್ಮಕ್ಕಳು ಕಣದಲ್ಲಿರೋ ಮಂಡ್ಯ, ಹಾಸನ ಗೆಲ್ಲಲೇಬೇಕು. ಆ 2 ಕ್ಷೇತ್ರದಲ್ಲಿ ಪ್ರಜ್ವಲ್ ಹಾಗೂ ನಿಖಿಲ್ ಸೋತರೆ ಮೈತ್ರಿಗೆ ಕಂಟಕ ಅನ್ನೋ ಆತಂಕ ಆರಂಭವಾಗಿದೆ. ಈ ಕಾರಣದಿಂದ ಒಟ್ಟಾಗಿ ಕೆಲಸ ಮಾಡಿ ಇಬ್ಬರನ್ನು ಗೆಲ್ಲಿಸಿ ಎಂದು ಹೈಕಮಾಂಡ್ ಖುದ್ದಾಗಿ ಸಿದ್ದರಾಮಯ್ಯ ಅವರಿಗೆ ಸೂಚನೆ ಕೊಟ್ಟಿದೆ ಎನ್ನಲಾಗುತ್ತಿದೆ.
Advertisement
ಹೈಕಮಾಂಡ್ ಸೂಚನೆಯಂತೆ ಮಂಡ್ಯ ಕಾಂಗ್ರೆಸ್ ಅಸಮಾಧಾನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಕ್ಷದ ಜಿಲ್ಲಾ ಮುಖಂಡರ ಸಭೆ ನಡೆಸಿದ್ರು. ತಡರಾತ್ರಿ ಮಂಡ್ಯ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಾಜಿ ಶಾಸಕ ಚೆಲುವರಾಯ ಸ್ವಾಮಿ, ಬಂಡಿಸಿದ್ದೇಗೌಡ ಮತ್ತು ಅರವಿಂದ ಸಾಗರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
Advertisement
ಅಲ್ಲದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಫರ್ಧೆ ಖಚಿತವಾದ ಮೇಲೆ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ನಿಖಿಲ್‍ಗೆ ಬೆಂಬಲ ನೀಡಲ್ಲ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡ್ತೆವೆ ಎಂಬ ಮಾತುಗಳು ಕೇಳಿ ಬರ್ತಿತ್ತು. ಈ ವಿಚಾರವನ್ನೂ ಕೂಡ ಸಭೆಯಲ್ಲಿ ಚರ್ಚಿಸಲಾಯಿತು.
ಒಟ್ಟಿನಲ್ಲಿ ಬಂಡಾಯ ಶಮನದ ಹೊಣೆ ಹೊತ್ತ ಸಿದ್ದರಾಮಯ್ಯ ಅವರಿಗೆ ಸರ್ಕಾರದ ಉಳಿವಿಗಾಗಿ ಪಣ ತೊಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.