ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆ ರಂಗೇರುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಶ್ರೀರಾಮುಲು ವಾಗ್ದಾಳಿ ಮುಂದುವರಿದಿದೆ. ಈ ಇಬ್ಬರು ನಾಯಕರು ಉಚ್ಛಾರ ದೋಷ, ಕನ್ನಡ ವ್ಯಾಕರಣ ಪಾಠಕ್ಕೆ ಇಳಿದಿದ್ದಾರೆ.
ನನಗೆ ಕನ್ನಡ ಹೇಳಿಕೊಡುತ್ತಾರಲ್ಲಪಾ… ನಾನು ಲಕ್ಷ ಹಾಗೂ ಪಕ್ಷ ಅಂತಾ ಸರಿಯಾಗಿ ಮಾತನಾಡುತ್ತೇನಾ ಎಂದ ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ‘ಕ್ಷ’ ಅನ್ನೋದು ಸ್ವತಂತ್ರ ಪದವೇ? ಅಥವಾ ಸಂಯುಕ್ತ ಪದವೇ ಅಂತಾ ಶ್ರೀರಾಮುಲು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
Advertisement
ಸ್ವರ ಅಂದ್ರೆ ಏನು? ವ್ಯಂಜನ, ಅನುನಾಸಿಕ, ಅಲ್ಪಪ್ರಾಣ, ದೀರ್ಘಸ್ವರ, ಒತ್ತಾಕ್ಷರಗಳ ಬಗ್ಗೆ ಶ್ರೀರಾಮುಲು ಅವರಿಗೆ ಗೊತ್ತಿದ್ದರೆ ಹೇಳಲಿ ನೋಡೋಣ ಎಂದು ತಿರುಗೇಟು ಕೊಟ್ಟ ಮಾಜಿ ಸಿಎಂ, ಶಾಸಕರು ಹಾಗೂ ಸಂಸದರು ಆಗಲು ಕನ್ನಡ ವ್ಯಾಕರಣ ಹಾಗೂ ಉಚ್ಛಾರಣೆ ಮಾನದಂಡವಲ್ಲ ಎಂದರು.
Advertisement
Advertisement
ನಾನು ಎಸ್‍ಎಸ್‍ಎಲ್ ವರೆಗೆ ನಾನು ಚಪ್ಪಲಿ ಹಾಕದೇ ಶಾಲೆಗೆ ಹೋಗುತ್ತಿದ್ದೆ. ಓದುವ ಉದ್ದೇಶದಿಂದ ರೂಮ್ ಮಾಡಿಕೊಂಡು, ಅಡುಗೆ ಮಾಡಿಕೊಂಡು ಜೀವನ ಕಳೆದಿರುವೆ. ಶಿಕ್ಷಣ ಪಡೆದರೆ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ ಎನ್ನುವ ಅರ್ಥದಲ್ಲಿ ಶ್ರೀರಾಮುಲು ಅವರಿಗೆ ಹೇಳಿದ್ದೆ ಎಂದರು.
Advertisement
ಕನ್ನಡ ವ್ಯಾಕರಣದ ಜೊತೆಗೆ ಕಾನೂನು ಪಾಠ ಕೂಡ ಮಾಡಿದರು. ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 302 (ಕೊಲೆ), 420 (ಮೋಸ) ಹೀಗೆ ಸೆಕ್ಷನ್‍ಗಳ ಪಾಠ ಮಾಡಿದರು. ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ ಅವರು, ಜನಾರ್ದನ ರೆಡ್ಡಿ ಲೂಟಿ ಹೊಡೆದು, ಶ್ರೀರಾಮುಲು ಅವರನ್ನು ಕೈಗೊಂಬೆಯಾಗಿ ಆಡಿಸುತ್ತಾರೆ. ಈ ಇಬ್ಬರು ನಾಯಕರ ಸಾಧನೆ ಇಷ್ಟೇ ಎಂದು ಲೇವಡಿ ಮಾಡಿದರು.
ರಫೇಲ್ ಹರಣದ ಕೈಬಿಟ್ಟು, ಬ್ಯಾಂಕ್‍ಗಳಿಗೆ ವಂಚನೆ ಮಾಡಿ ವಿದೇಶ ಸೇರಿರುವ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಹೆಸರು ಬಳಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ, ನಾನು ಚೌಕಿದಾರ್ ಅಂತಾರೆ. ಆದರೆ ಅವರ ಆಡಳಿತ ಅವಧಿಯಲ್ಲಿಯೇ ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಬ್ಯಾಂಕ್‍ಗೆ ಸಾಲ ಮರುಪಾವತಿ ಮಾಡದೇ ವಿದೇಶ ಸೇರಿಕೊಂಡಿದ್ದಾರೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಹೇಳಿಯೇ ವಿಜಯ್ ಮಲ್ಯ ಲಂಡನ್‍ಗೆ ಹೋಗಿದ್ದು ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಲಗಿದ ಕೂಡಲೇ ಅವರಿಗೆ ವಿಧಾನಸೌಧ ಮೂರನೇ ಮಹಡಿ ಕಾಣಿಸುತ್ತದೆ. ಅವರಿಗೆ ನಿದ್ರೆನೇ ಬರಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ನೂರು ಬಾರಿ ಹೇಳಿದರೂ ಸರ್ಕಾರ ಬೀಳಲ್ಲ ಎಂದು ಲೇವಡಿ ಮಾಡಿದರು.
ಜಿಲ್ಲೆಯಲ್ಲಿ 6 ಜನ ಶಾಸಕರು ಕಾಂಗ್ರೆಸ್‍ನವರಿದ್ದಾರೆ. ನೀತಿ ಸಂಹಿತೆ ಇದೆ ಹೇಳಬಾರದು. ಆದರೂ ಹೇಳುತ್ತಿರುವೆ, ನವೆಂಬರ್ 3ರಂದು ಚುನಾವಣೆ ನಡೆದ ಬಳಿಕ, ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನಿಡುತ್ತೇವೆ ಎಂದ ಸಿದ್ದರಾಮಯ್ಯ ಭರವಸೆ ನೀಡಿದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ರಾಜಕೀಯ ಅರ್ಥ ಆಗಲ್ಲ. ನಾನು ಅಲ್ಲಿ ಏಳು ಬಾರಿ ಗೆದ್ದಿದ್ದೇನೆ. ಅವರು ಬಿಜೆಪಿಗೆ ಬಂದ್ರು, ಟಿಕೆಟ್ ಸಿಕ್ಕಿತು ಗೆದ್ದರು. ಆದರೆ ಅವರು ಮೂಲತಃ ಸಕಲೇಶಪುರದವರು, ಮೈಸೂರಿನವರಲ್ಲ. ಪ್ರತಾಪ ಸಿಂಹ ಅವರಷ್ಟು ಸುಳ್ಳು ಹೇಳುವ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಟೀಕಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv