– ರಾಹುಲ್ ನಾಯಿ, ಮೋದಿ ಸಿಂಹವೆಂದ ಬಿಜೆಪಿ ಮುಖಂಡ
ಗದಗ: ನರೇಂದ್ರ ಮೋದಿ ಒಬ್ಬ ನೀಚ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಬಾಗಲಕೋಟೆ ಲೋಕಸಭಾ ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರ ಮತಯಾಚನೆಯ ಬಹಿರಂಗ ಪ್ರಚಾರಸಭೆಯ ವೇಳೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರೂ ಹೇಳಿಕೊಂಡಿರಲಿಲ್ಲ. ಆದ್ರೆ ಮಿಸ್ಟರ್ ಮೋದಿ ಒಂದೆರಡು ಸರ್ಜಿಕಲ್ ಸ್ಟ್ರೈಕ್ ಮಾಡಿ ಮಹಾನ್ ಸಾಧನೆ ಮಾಡಿದ್ದೇನೆ ಎಂದುಕೊಂಡಿದ್ದಾರೆ. ಸೇನೆ ಹಾಗೂ ಸೈನಿಕರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಪಿ.ಸಿ ಗದ್ದಿಗೌಡರ್ ವಿರುದ್ಧ ಮಾತಿನ ಗಧಪ್ರಹಾರ ನಡೆಸಿದರು. ಪ್ರಚಾರ ಭಾಷಣದಲ್ಲಿ ಅಭ್ಯರ್ಥಿ ವೀಣಾ ಕಾಶಪ್ಪನವರ್ ವೇದಿಕೆಯಲ್ಲಿ ಸೆಂಟಿಮೆಂಟ್ ಡೈಲಾಗ್ ಹೇಳುವ ಮೂಲಕ ಕಣ್ಣೀರಿಟ್ಟು ಮತಯಾಚನೆ ಮಾಡಿದ್ರು.
ನನ್ನ ಎರಡು ಮಕ್ಕಳನ್ನ ಬಿಟ್ಟು ನಿಮ್ಮ ಸೇವೆಗೆ ಬಂದಿದ್ದೇನೆ. ನಿಮ್ಮಲ್ಲಿ ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ನರಗುಂದ ಕ್ಷೇತ್ರದಲ್ಲಿ ಇದು ನನ್ನ ಕೊನೆಯ ಭಾಷಣವಾಗಬಾರದು. ಸಂಸತ್ತಿನಲ್ಲಿ ಮಹಾದಾಯಿ ಬಗ್ಗೆ ಮಹಿಳೆಯಾಗಿ ಧ್ವನಿ ಎತ್ತಲು ಈ ಮಹಿಳೆಗೆ ಅವಕಾಶ ನೀಡಿ ಎಂದು ವಿನಂತಿಸಿಕೊಂಡರು.
ನಾನು ನಿಮ್ಮ ಮನೆಯ ಮಗಳೆಂದು ತಿಳಿದು ಆಶೀರ್ವಾದ ಮಾಡಿ ಅನ್ನುವ ಮೂಲಕ ಮತಸೆಳೆಯುವ ತಂತ್ರಗಾರಿಕೆಯ ಮಾತಗಳನ್ನಾಡಿ ಕಣ್ಣೀರಿಟ್ಟು, ವೇದಿಕೆಗೆ ತಲೆಬಾಗಿ ಕೈಮುಗಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ಮಾಜಿ ಶಾಸಕ ಬಿ.ಆರ್ ಯಾವಗಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಇತ್ತ ಅಹಮದಾಬಾದ್‍ನಲ್ಲಿ ಪ್ರಚಾರದ ವೇಳೆ ಮಾತನಾಡಿದ ಗುಜರಾತ್‍ನ ಬಿಜೆಪಿ ಸಚಿವ ಗಣಪತ್ ವಾಸವ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನಾಯಿಗೆ ಹೋಲಿಸಿದ್ದಾರೆ. ಪ್ರಧಾನಿ ಮೋದಿ ಎಲ್ಲೇ ಹೋದ್ರೂ ಗಿರ್ ಸಿಂಹದ ರೀತಿ ಕಾಣಿಸ್ತಾರೆ. ಆದ್ರೆ ರಾಹುಲ್ ಗಾಂಧಿ ನಾಯಿಮರಿ ಬಾಲ ಅಲ್ಲಾಡಿಸುತ್ತಾ ಇರುವಂತೆ ಕಾಣುತ್ತಾರೆ. ಚೀನಾ, ಪಾಕಿಸ್ತಾನ ರೊಟ್ಟಿ ಕೊಟ್ಟಲ್ಲೆಲ್ಲಾ ಬಾಲ ಅಲ್ಲಾಡಿಸುತ್ತಾ ಹೋಗುತ್ತಾರೆ ಎಂದು ರಾಹುಲ್ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.