ಪ್ರತಾಪ್ ಸಿಂಹರ ಪುಸ್ತಕ ಓದಿ – ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಟಾಂಗ್

Public TV
2 Min Read
SIDDU REDDY 1

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಬರೆದ ಪುಸ್ತಕವನ್ನು ಓದಲು ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಮಾಜಿ ಸಿಎಂ, ನಿಮ್ಮದೇ ಪಕ್ಷದ ಸಂಸದರು ಬರೆದ ಪುಸ್ತಕ ಓದಿದರೆ ನೀವು ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಅಂತ ಗೊತ್ತಾಗುತ್ತದೆ ಅಂತ ತಿಳಿಸಿದ್ದಾರೆ.

ಟ್ವೀಟ್ ನಲ್ಲೇನಿದೆ?
ಸಿದ್ದರಾಮಯ್ಯನವರು ಅನ್ಯಾಯವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿಯವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ ಅಂತ ಬರೆದುಕೊಂಡಿದ್ದಾರೆ.

ಪುಸ್ತಕ ಓದಲು ಹೇಳಿದ್ದು ಯಾಕೆ?
ಇಂದು ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಾಂಗ್ರೆಸ್ ಪಕ್ಷದವರು ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯನಂತವರು ನಮಗೆ ಏನೆಲ್ಲ ತೊಂದರೆಗಳನ್ನು ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್ ಪಕ್ಷದ ವತಿಯಿಂದ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿ ಅಕ್ರಮ ಗಣಿಗಾರಿಕೆ ನಡೀತಾ ಇದೆ ಅಂತಾ ಹೇಳಿ ಸಾರ್ವಜನಿಕರಲ್ಲಿ ಗೊಂದಲವನ್ನು ಮೂಡಿಸಿದ್ದಾರೆ ಎಂದು ಆರೋಪಿಸಿದ್ದರು.

2011 ಸೆ.5ರಂದು ಸಿಬಿಐ ಮೂಲಕ ನನ್ನನ್ನು ಬಂಧನಕ್ಕೆ ಒಳಪಡಿಸಿ 4 ವರ್ಷಗಳ ಕಾಲ ನನ್ನನ್ನು ಜೈಲಿನಲ್ಲಿ ಬಂಧಿಯಾಗಿ ಇರಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರ 4 ವರ್ಷ ಕಾಲ ನನ್ನನ್ನು ಬಂಧಿಸಿತ್ತು. ಬಳ್ಳಾರಿಗೆ ಪಾದಯಾತ್ರೆಗೆ ಬಂದ ಸಂದರ್ಭದಲ್ಲಿ ಇಡೀ ಕರ್ನಾಟಕ ರಾಜ್ಯ ಇಂದು ಸಂಪತ್ತನ್ನು ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಮೂಲಕ 1 ಲಕ್ಷ ಕೋಟಿ ಹಣ ಲೂಟಿ ಮಾಡಿರುವಂತಹ ರೆಡ್ಡಿಗಳಿಂದ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಆ ಲೂಟಿ ಮಾಡಿರುವಂತಹ ಹಣವನ್ನು ಅವರಿಂದ ಪಡೆದು ರಾಜ್ಯದಲ್ಲಿರುವ ಬಡವರಿಗೆ ಮನಗಳನ್ನು ಕಟ್ಟಿಕೊಡುವುದಾಗಿ ಘೋಷಣೆ ಮಾಡಿದ್ದರು. ನಿಮ್ಮಲ್ಲಿ ನಿಜವಾಗಿ ಪ್ರಾಮಾಣಿಕತೆ, ಮಾನವೀಯತೆ ಇದ್ದರೆ ಇಡೀ ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದ ವ್ಯಕ್ತಿ ಅಂದ್ರೆ ಅದು ನಾನೇ. ಇಷ್ಟೆಲ್ಲ ಹಿಂಸೆ ಕೊಟ್ಟು 4 ವರ್ಷ ಒಳಗಡೆ ಇಟ್ಟು, ನೀನು ಈ ರಾಜ್ಯ ಮುಖ್ಯಮಂತ್ರಿ ಆಗಿದ್ದು, 5 ವರ್ಷಗಳ ಕಾಲ ನಿನ್ನ ಕೈಯಲ್ಲಿ ಅಧಿಕಾರ ಇತ್ತು. ಕೇಂದ್ರದಲ್ಲಿಯೂ ನಿಮ್ಮದೇ ಅಧಿಕಾರವಿತ್ತು. ಹೊರಗೆ ಬಂದರೆ ವಿಚಾರಣೆ ತಡೆಯುತ್ತೇನೆ ಎಂದು ಹೇಳಿ ನನ್ನ ಬಂಧನದಲ್ಲಿಟ್ಟು ನನ್ನಿಂದ ಎಷ್ಟು ಹಣ ರಿಕವರಿ ಮಾಡಿದ್ದೀರಿ ಅಂತ ಪ್ರಶ್ನಿಸಿದ ಅವರು, ನಾಚಿಕೆ ಇಲ್ಲದೇ ಇವತ್ತೂ ಬಳ್ಳಾರಿ ಬಂದು ಅಕ್ರಮ ಗಣಿಗಾರಿಕೆ ಅಂತ ಮಾತಾಡೋದು ಸರಿಯಲ್ಲ ಅಂತ ವಾಗ್ದಾಳಿ ನಡೆಸಿದ್ರು.

ರಕ್ಷಣೆ ಕೊಡಲಿಲ್ಲ:
ಕಳೆದ 7 ವರ್ಷಗಳಲ್ಲಿ ನನಗೆ ರಕ್ಷಣೆ ಕೋರಿ ಮನವಿ ಮಾಡಿದ್ದೆ. ಆದ್ರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನಗೆ ರಕ್ಷಣೆ ಸಹ ಕೊಡಿಸಲಿಲ್ಲ. ಬೆಂಗಳೂರಿನ ನನ್ನ ಮನೆ ಸುತ್ತಮುತ್ತ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಚುನಾವಣೆ ಮುಗಿಯದರೊಳಗೆ ಇನ್ನೂ ಏನಾದ್ರೂ ಆಗಬಹುದು. ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ನಾನು ಯಾರಿಗೂ ಹೆದರಲ್ಲ. ಹೆದರೋ ಪ್ರಶ್ನೆಯೇ ಇಲ್ಲ. ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ನನಗೆ ವೈ ಕೆಟಗೆರಿ ಭದ್ರತೆ ಇದೆ. ನಾನು ಲಿಖಿತವಾಗಿ ರಕ್ಷಣೆ ನೀಡಿ ಅಂದ್ರೂ ಇಲ್ಲಿ ಕೊಡುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *