ಬೆಳಗಾವಿ: ಜೆಡಿಎಸ್ ಪಕ್ಷವನ್ನು ಕಟ್ಟಿ, ಬೆಳೆಸಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ನಾನೇ ಹೊರತು ಎಚ್.ಡಿ.ಕುಮಾರಸ್ವಾಮಿ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಒಂದು ಪಕ್ಷ ಕಟ್ಟಿನೋಡಲಿ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ನಾನು ಪಕ್ಷ ಕಟ್ಟಿಯೇ ಬೆಳೆದಿದ್ದು. ಜೆಡಿಎಸ್‍ಗೆ ಆಮೇಲೆ ಬಂದ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ, ಮಂತ್ರಿಯಾಗಿದ್ದು ಎಂದು ಗುಡುಗಿದರು.
ನಾನು ನಂಬಿದ ಗಿಳಿಗಳು ಹದ್ದಾಗಿ ಕಾಡಿದ್ದು ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಹೇಳಿಕೆ ನಾನು ಹೇಳಿದ್ದಲ್ಲ ರಮೇಶ್ ಕುಮಾರ್ ಹೇಳಿದ್ದು. ಅದಕ್ಕಾಗಿ ಮತ್ತೆ ಟ್ವೀಟ್ ಮಾಡಿದ್ದಾರೆ. ನನ್ನ ಬೆಂಬಲದಿಂದ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿಲ್ಲ. ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿದ್ದರು. ಪಾಪ ಅವರು ಹೇಳುವುದರಲ್ಲಿ ಸತ್ಯವಿದೆ ಎಂದು ನಗುತ್ತಲೇ ಟಾಂಗ್ ಕೊಟ್ಟರು.
ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪನ ಅವರನ್ನು ಸೋಲಿಸಿದ್ದ ನಾನಲ್ಲ. ಮುನಿಯಪ್ಪ ಅವರಿಗೆ ವೋಟ್ ಹಾಕುವುದಿಲ್ಲ ಅಂತ ಜೆಡಿಎಸ್‍ನ ಶ್ರೀನಿವಾಸಗೌಡ ಹೇಳಿದ್ದರು. ಆಗ ಎಚ್.ಡಿ.ಕುಮಾರಸ್ವಾಮಿ ಎಲ್ಲಿಗೆ ಹೋಗಿದ್ದರು. ಬಿಜೆಪಿಗೆ ಮತ ಹಾಕಿ ಅಂತ ಕುಮಾರಸ್ವಾಮಿ ಹೇಳಿದ್ದರು ಅಂತ ಜೆಡಿಎಸ್‍ನವರೇ ನಮಗೆ ಹೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಅವರು ಏನು ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.
ಉಪ ಚುನಾವಣೆಯಲ್ಲಿ 15 ಕ್ಷೇತ್ರದಿಂದಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ. ಯಾವುದೇ ಪಕ್ಷದ ಜೊತೆಗೆ ಮೈತ್ರಿಯಿಲ್ಲ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.