ಬೆಂಗಳೂರು: ಬಿಜೆಪಿಯವರಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಆಪರೇಷನ್ ಕಮಲದ ವಿರುದ್ಧ ಗರಂ ಆಗಿರುವ ಮಾಜಿ ಸಿಎಂ, ಬಿಜೆಪಿ ನಾಯಕರು ಪ್ರತಿ ಶಾಸಕರಿಗೆ 25ರಿಂದ 30 ಕೋಟಿ ರೂ. ನೀಡಿ ಖರೀದಿಗೆ ಮುಂದಾಗಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತೆ? ಸರ್ಕಾರ ಬೀಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ. ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ?
ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ @BJP4Karnataka ಇಷ್ಟು ದಿನ ಬೇರೆ ಏನು ಮಾಡಿದೆ?
— Siddaramaiah (@siddaramaiah) December 30, 2018
ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರಾ? ಪಕ್ಷಕ್ಕೆ ರಾಜೀನಾಮೆ ಕೊಡುವ ವಿಚಾರವನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರಾ? ಮಾಜಿ ಸಚಿವರ ಜೊತೆಗೆ ಶಾಸಕರನ್ನು ಮನೆಗೆ ಸೇರಿಸಿಕೊಳ್ಳಲು ಬಿಜೆಪಿಯವರು ಕುದುರೆ ವ್ಯಾಪಾರ ನಡೆಸಿದ್ರಾ ಎನ್ನುವ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಪ್ರಾಮಾಣಿಕ ವ್ಯಕ್ತಿ, ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ರಮೇಶ್ ಜಾರಕಿಹೊಳಿ ನಮಗೂ ಸಿಕ್ಕಿಲ್ಲ, ಬಿಜೆಪಿಯವರಿಗೂ ಸಿಕ್ಕಿಲ್ಲ ಅಂತ ಹೇಳಿಕೊಂಡಿದ್ದ ಸಿದ್ದರಾಮಯ್ಯ ಅವರಿಗೆ ಆಪರೇಷನ್ ಕಮಲದ ಮಾಹಿತಿ ಸಿಕ್ಕಿತೆ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.
ರಮೇಶ್ ಜಾರಕಿಹೊಳಿ ಅವರನ್ನು ಪಕ್ಷಕ್ಕೆ ಕರೆತರುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಈ ಮೂಲಕ ಮಾಜಿ ಸಚಿವರ ಬೆಂಬಲಿಗರಾದ ನಾಗೇಂದ್ರ, ಭೀಮಾನಾಯಕ್, ಅಜಯ್ ಸಿಂಗ್ ಸೇರಿದಂತೆ ಅನೇಕ ಕಾಂಗ್ರೆಸ್ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸಲು ಬಿಜೆಪಿಯವರು ಪ್ಲಾನ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಸಿದ್ಧವಾಗಿದೆ ಎಂದು ಅರಿತ ಸಿದ್ದರಾಮಯ್ಯ ಟ್ವಿಟರ್ ಮೂಲಕ ಕಿಡಿಕಾರಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ನೂತನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯಾದ್ಯಂತ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಲಿವೆ. ಈ ಬಗ್ಗೆ ಮುಖ್ಯಮಂತ್ರಿ @hd_kumaraswamy ಅವರ ಜೊತೆ ಚರ್ಚಿಸಿ ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
— Siddaramaiah (@siddaramaiah) December 30, 2018
ಇದರ ಬೆನ್ನಲ್ಲೇ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ನೂತನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯಾದ್ಯಂತ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಲಿವೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv