ಬಳ್ಳಾರಿ: ಕರ್ನಾಟಕ ಉಪಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ನಾಯಕರ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರವಾಗಿ ಮತಯಾಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಏನೂ ಇಲ್ಲ. ರಾಮುಲುರದ್ದು ರೆಡ್ಡಿಯನ್ನ ಜೈಲಿನಿಂದ ಬಿಡಿಸಿಕೊಂಡು ಬಂದಿದಷ್ಟೇ ಸಾಧನೆ ಎಂದು ಜರೆದರು.
ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದ 5 ಕ್ಷೇತ್ರಗಳಲ್ಲೂ ನಾನು ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆಯೂ ಕಾಂಗ್ರೆಸ್ ಪರ ಅಲೆ ಇದೆ. ಬಿಜೆಪಿ ವಿರುದ್ಧವಾದ ಅಲೆ ಎಲ್ಲೆಡೆಯಿದೆ, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಉಗ್ರಪ್ಪ ಗೆಲ್ಲುವುದು ಅಷ್ಠೆ ಖಚಿತವೆಂದರು. ಹಸಿರು ಶಾಲು ಹಾಕಿದ ಮಿಸ್ಟರ್ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡಲಿಲ್ಲ. ಅಲ್ಲದೇ ರಾಜ್ಯದ ಜನರು ಕೇಂದ್ರದ ಆಡಳಿತದಿಂದ ಭ್ರಮ ನಿರಶನಗೊಂಡಿದ್ದಾರೆ. ಮೋದಿ ವಚನ ಭ್ರಷ್ಟರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ, ಮೋದಿ ಚೌಕಿದಾರ ಅಲ್ಲ. ಮೋದಿ ಚೋರದಾರ ಆಗಿದ್ದಾನೆಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.
ಬಿಜೆಪಿ ಭದ್ರಕೋಟೆಯನ್ನ ಮತ್ತೆ ವಶಪಡಿಸಿಕೊಳ್ಳಲು ಕೈ ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಲ್ಲೂ ರೆಡ್ಡಿ ರಾಮುಲು ಅಡ್ಡಾದಲ್ಲಿ ಮೈತ್ರಿಕೂಟ ಸರ್ಕಾರದ ನಾಯಕರು ಉಗ್ರಪ್ಪ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ, ಕೂಡ್ಲಗಿ, ಬಳ್ಳಾರಿಯಲ್ಲಿ ಭರ್ಜರಿ ಕ್ಯಾಂಪೇನ್ ಮಾಡೋ ಮೂಲಕ ಕೈನಾಯಕರು ಮತ ಬೇಟೆಯಾಡುತ್ತಿದ್ದಾರೆ. ಹಗರಿಬೊಮ್ಮನಹಳ್ಳಿಯ ಪಟ್ಟಣದಲ್ಲಿ ಉಗ್ರಪ್ಪ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಇಬ್ರಾಹಿಂ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಬೃಹತ್ ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv