ಬಾಗಲಕೋಟೆ: ವಿಧಾನ ಸಭೆ ಚುನಾವಣೆಯ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ತಮ್ಮನ್ನು ಕಾಂಗ್ರೆಸ್ ಪಕ್ಷದಲ್ಲಿ ಯಾರು ಮೂಲೆಗುಂಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದ ಪ್ರಶ್ನೆಗೆ ಉತ್ತಿರಿಸಿದ ಅವರು, ನನ್ನನ್ನು ಹಾಗೂ ನನ್ನ ಆಪ್ತರನ್ನು ಮೂಲೆಗುಂಪು ಮಾಡಿಲ್ಲ. ಸಚಿವ ಸ್ಥಾನ ಸಿಕ್ಕವರು, ಸಿಗದೇ ಇರುವವರು ಎಲ್ಲರೂ ನನ್ನ ಪರಮ ಆಪ್ತರೇ. ಸದ್ಯ ನಾನೇ ಶಾಸಕಾಂಗ ಪಕ್ಷದ ನಾಯಕ. ನನ್ನನ್ನು ಕಡೆಗಣಿಸಿದ್ದಾರೆ ಎಂದು ಯಾರು ಹೇಳಿದ್ದು ಎಂದು ಮರು ಪ್ರಶ್ನೆ ಹಾಕಿದರು.
ಇದೇ ವೇಳೆ ಕ್ಷೇತ್ರದ ಭೇಟಿ ಕುರಿತು ಉತ್ತರಿಸಿದ ಅವರು, ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ಆಗಮಿಸಿದ್ದು, ಬಾದಾಮಿಯಲ್ಲಿ ನನ್ನ ಗೆಲುವಿಗೆ ಶ್ರಮಿಸಿದ್ದಕ್ಕೆ ಜನರಿಗೆ ಧನ್ಯವಾದ ಹೇಳಲು ಇಲ್ಲಿಗೆ ಬಂದಿದ್ದೇನೆ. ಕ್ಷೇತ್ರದುದ್ದಕ್ಕೂ ಸಂಚರಿಸಿ, ನನ್ನ ಗೆಲುವಿಗೆ ಕಾರಣರಾದ ಅಭಿಮಾನಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಬಾದಾಮಿ ಒಂದು ಐತಿಹಾಸಿಕ ಪ್ರವಾಸಿ ತಾಣ, ಇದನ್ನು ಹೆಚ್ಚು ಅಭಿವೃದ್ಧಿ ಮಾಡುವುದು ನನ್ನ ಕನಸು ಎಂದು ಹೇಳಿದರು.
ಅಸಮಾಧಾನ ಸಾಮಾನ್ಯ: ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಸಾಮಾನ್ಯ, ಸದ್ಯ ಸಾಮಾಜಿಕ ನ್ಯಾಯದ ಅಡಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದ್ದು, ಇನ್ನೂ ಆರು ಸ್ಥಾನ ಬಾಕಿ ಇವೆ. ಅವುಗಳನ್ನು ಸಾಮಾಜಿಕ ನ್ಯಾಯದಡಿ ಹಂಚಿಕೆ ಮಾಡಲಾಗುವುದು ಎಂದು ಹೇಳಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗಬಹುದು ಎಂದು ಸುಳಿವು ನೀಡಿದರು.
ಕಾಂಗ್ರೆಸ್ ಸಚಿವ ಸ್ಥಾನದ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಎಸ್ ಆರ್ ಪಾಟೀಲ್ ಅಸಮಾಧಾನದ ಕುರಿತು ಉತ್ತರಿಸಿ, ಎಸ್ ಆರ್ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಸಹ ನನ್ನ ಆಪ್ತರೇ. ಎಸ್ ಆರ್ ಪಾಟೀಲ್ ಬರುವ 11 ರಂದು ಇಲ್ಲಿಗೆ ಬರುತ್ತಾರೆ. ಹೀಗಾಗಿ ನಮ್ಮ ನಡುವೆ ಯಾವುದೇ ಅಸಮಾಧಾನವಿಲ್ಲ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎನ್ನುವುದು ಸುಳ್ಳು ಸುದ್ದಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿಯ ಕಡೇ ಗಮನಹರಿಸುವುದಾಗಿ ತಿಳಿದರು.