ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳಿಂದ ಸ್ವಕ್ಷೇತ್ರ ಬದಾಮಿಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆದರೆ ಅವರ ಕಣ್ಣಿಗೆ ಮತ್ತೆ ಸೋಂಕು ತಗುಲಿ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪ್ರವಾಸದ ಹಿನ್ನೆಲೆಯಲ್ಲಿ ಕಣ್ಣಿಗೆ ಸೋಂಕು ತಗುಲಿ ಬದಾಮಿಯಿಂದ ವಾಪಸ್ ಬಂದಿದ್ದಾರೆ. ಬುಧವಾರ ಮಧ್ಯರಾತ್ರಿ 12 ಗಂಟೆಗೆ ವೈದ್ಯರು ಕಣ್ಣು ಪರೀಕ್ಷೆ ಮಾಡಿದ್ದಾರೆ. ಆಗ ಎರಡು ದಿನಗಳ ಕಾಲ ಓಡಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸವನ್ನು ಸಿದ್ದರಾಮಯ್ಯ ಅವರು ರದ್ದು ಮಾಡಿದ್ದಾರೆ.
Advertisement
Advertisement
ಬುಧವಾರ ಬದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಪ್ರವಾಹದಿಂದ ಅಂದಾಜು 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ ಸದ್ಯಕ್ಕೆ ನಾವು ಪ್ರವಾಹ ಪರಿಹಾರಕ್ಕೆ ಐದು ಸಾವಿರ ಕೋಟಿ ಕೊಡಿ ಎಂದು ಕೇಳಿದ್ದೇವೆ. ಆ ಮೇಲೆ ವರದಿ ಆಧಾರದ ಮೇಲೆ ಹೆಚ್ಚಿನ ಪರಿಹಾರ ಕೊಡಲಿ. ಕೇಂದ್ರ ಸರ್ಕಾರ ಕೊಡದಿದ್ದರೆ ರಾಜ್ಯ ಸರ್ಕಾರವಾದರೂ ಕೊಡಲಿ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ, ನಾವಾದರೂ ಮಾತನಾಡುತ್ತೇವೆ. ಜನರು ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದೆ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಪ್ರವಾಹ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದ್ದರು.