Connect with us

Bengaluru City

ಪ್ರತ್ಯೇಕ ಲಿಂಗಾಯತ ಧರ್ಮದ ಪರ ನಿಂತಿದಕ್ಕೆ ಸಿದ್ದರಾಮಯ್ಯ ಸೋತ್ರಾ?

Published

on

-ಅಗತ್ಯ ಸಮಯಕ್ಕೆ ನನ್ನ ಬೆಂಬಲಕ್ಕೆ ಯಾರು ಬರಲಿಲ್ಲ
-ಸಾಲು ಸಾಲು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ ಮಾಜಿ ಸಿಎಂ

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ರಾಜ್ಯದಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಡಿದ್ದು ತಪ್ಪಾಯ್ತೆಂದು ಕ್ಷಮೆ ಕೇಳಿ ಸುದ್ದಿಯಾಗಿದ್ರು. ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಯು ತೀವ್ರತೆ ಪಡೆದುಕೊಳ್ಳಲು ಕಾರಣರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ವಿಚಾರವನ್ನು ಮತ್ತೆ ಕೆದಕಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ತಿರಸ್ಕರಿಸಿದೆ. ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ ನಾಯಕರು ಮತ್ತೆ ಮತ್ತೆ ಲಿಂಗಾಯತ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇದ್ದಾರೆ. ಇತ್ತೀಚೆಗೆ ಐದು ಕ್ಷೇತ್ರಗಳ ಉಪಚುನಾವಣೆಗಳಿಗೂ ಮುನ್ನ ಸಚಿವ ಡಿ.ಕೆ.ಶಿವಕುಮಾರ್, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾಡಿದ್ದು ತಪ್ಪಾಯ್ತೆಂದು ಒಪ್ಪಿಕೊಂಡಿದ್ರು. ಈಗ, ಸಚಿವ ಡಿಕೆಶಿ ಹಾದಿಯಲ್ಲೇ ನಡೆದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆದಿದ್ದಾರೆ.

ಸಿದ್ದರಾಮಯ್ಯ ಟ್ವೀಟ್:
ಸಂವಿಧಾನವನ್ನು ಸುಡಬೇಕು ಎನ್ನುವವರು ದೇಶವನ್ನು ನಾಶ ಮಾಡುವವರು. ಅವರಿಂದ ಬದಲಾವಣೆ ಸಾಧ್ಯವೇ? ಇದು ಸಂವಿಧಾನದ ವಿರುದ್ಧ ಮಾತ್ರ ಅಲ್ಲ. ದೇಶದ ವಿರುದ್ಧದ ಸಂಚು. ನನ್ನನ್ನು ಒರಟ ಎನ್ನುತ್ತಾರೆ. ಸ್ವಾಭಿಮಾನ ಕೆಲವರಿಗೆ ಒರಟುತನದಂತೆ ಕಾಣುತ್ತದೆ. ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬಾರದಿದ್ದರೆ ಸ್ವಾಭಿಮಾನಿಗಳಾಗಲು ಸಾಧ್ಯವಿಲ್ಲ. ರಾಜಕೀಯ ಸ್ವಾತಂತ್ರ್ಯದಿಂದಲೇ ಸಮಾನತೆ ಬರಲು ಸಾಧ್ಯ ಇಲ್ಲ. ಅದು ಸಾಧ್ಯವಾಗಬೇಕಾದರೆ ರಾಜಕೀಯ ಸ್ವಾತಂತ್ರ್ಯದ ಜೊತೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಕೂಡ ಬರಬೇಕು. ಇದನ್ನೇ ಡಾ.ಅಂಬೇಡ್ಕರ್ ಹೇಳಿದ್ದು.

ಕರ್ಮ ಸಿದ್ಧಾಂತವನ್ನು ನಂಬಬೇಡಿ ಎಂದು ಬಸವಣ್ಣ ಹೇಳಿದ್ದರು. ಆದರೆ, ಯಾರೂ ಅದನ್ನು ಪಾಲನೆ ಮಾಡುತ್ತಿಲ್ಲ. ನಮ್ಮ ತಲೆಗೆ ಮೌಢ್ಯ ಬಿತ್ತಿರುವುದೇ ಇದಕ್ಕೆ ಕಾರಣ. ಇದನ್ನು ಪ್ರಶ್ನೆ ಮಾಡಿದವರಿಗೆ ಹುಚ್ಚರು, ಧರ್ಮ ವಿರೋಧಿಗಳು ಎಂಬ ಹಣೆಪಟ್ಟಿ ಅಂಟಿಸಲಾಗುತ್ತದೆ. ಆದರೆ ಬಸವ ತತ್ವ ಪಾಲನೆಗೆ ನಾವು ಹಿಂಜರಿಯಬಾರದು. ರಾಜ್ಯದಲ್ಲಿ ಇವತ್ತು ನಾಲ್ಕು ಕೋಟಿ ಜನ ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅನ್ನಭಾಗ್ಯ ಯೋಜನೆ. ಜನರನ್ನು ಹಸಿವಿನ ಸಂಕಟದಿಂದ ಕಾಪಾಡಿ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ತೃಪ್ತಿ ನನಗಿದೆ. ಇಷ್ಟು ಸಾಕು.

ಪ್ರತ್ಯೇಕ ಲಿಂಗಾಯತ ಧರ್ಮ ಮಾಡಿ ಎಂದು ಕೇಳಿದವರು ಯಾರು? ಅವರು ಲಿಂಗಾಯತ ಸಮುದಾಯದ ಮುಖಂಡರಲ್ಲವೇ? ಆದರೆ, ಹಿಂದೂ ಧರ್ಮದ ವಿರೋಧಿ ಎಂಬ ಟೀಕೆಗೆ ಗುರಿಯಾಗಿದ್ದು ಮಾತ್ರ ನಾನು. ಪ್ರತ್ಯೇಕ ಧರ್ಮ ಮಾಡಿ ಎಂದು ಒತ್ತಾಯ ಮಾಡಿದವರು ಅಗತ್ಯ ಸಮಯದಲ್ಲಿ ನನ್ನ ಬೆಂಬಲಕ್ಕೆ ಬರಲೇ ಇಲ್ಲ. ಬದಲಾವಣೆ ಪರ ನಿಂತವರಿಗೆ ಈ ದೇಶದಲ್ಲಿ ಹಿನ್ನಡೆ ಆಗಿದೆ. ಮಧುವರಸನ ಮಗಳಿಗೆ ಮದುವೆ ಮಾಡಿಸಿದ ಬಸವಣ್ಣನವರನ್ನೇ ಬಿಜ್ಜಳನ ಆಸ್ಥಾನದಿಂದ ಹೊರ ಕಳುಹಿಸಿದರು. ನಾವು ಇಂಥ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವವರೆಗೆ ಬದಲಾವಣೆ ಸಾಧ್ಯವಿಲ್ಲ. ಮೊದಲು ನಾವು ಬದಲಾಗಬೇಕು ಆಗ ಮಾತ್ರ ಸಮಾನತೆ ಕಾಣಲು ಸಾಧ್ಯ. ಸಿದ್ದರಾಮಯ್ಯ ಅವರನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ಮನುವಾದಿಗಳಿಗೆ ಮತ ಹಾಕುವುದು ಯಾವ ನ್ಯಾಯ? ಇದಕ್ಕಾಗಿ ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕಾಗುತ್ತದೆ.

ಯಾರದು ತಪ್ಪು?
ಮಾಜಿ ಸಿಎಂ ಸಿದ್ದರಾಮಯ್ಯರ ಈ ಅನಿಸಿಕೆ ಅವರ ಮನಸ್ಥಿತಿಯನ್ನು ತೆರೆದಿಟ್ಟಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಕಾರಣದಿಂದಾಗಿಯೇ ತಮಗೆ ಮತ್ತೆ ಸಿಎಂ ಆಗುವ ಅವಕಾಶ ತಪ್ಪಿದಂತಾಗಿದೆ ಎಂಬುದು ಸಿದ್ದರಾಮಯ್ಯರ ಬೇಸರ. ಈ ಬೇಸರವೇ ಈಗ ಅವರು ಇಡೀ ತಪ್ಪು ಲಿಂಗಾಯತ ಮುಖಂಡರದ್ದೇ ಎಂಬ ಅಭಿಪ್ರಾಯಕ್ಕೆ ಬರುವ ಸ್ಥಿತಿಗೆ ದೂಡಿದೆ. ಅಷ್ಟೇ ಅಲ್ಲ ಪ್ರತ್ಯೇಕ ಲಿಂಗಾಯತ ಧರ್ಮದ ಕಾರಣದಿಂದ ತಾವು ಹಿಂದೂ ವಿರೋಧಿ ಹಣೆಪಟ್ಟಿ ಕಟ್ಕೊಂಡೆ ಎಂಬ ಸಿಟ್ಟು ಸಹ ಅವರ ಈ ಟ್ವೀಟ್ ನಲ್ಲಿ ಕಾಣ್ತಿದೆ.

ಪ್ರತ್ಯೇಕ ಧರ್ಮ ಮಾಡಿ ಅಂದವರೇ ಅಗತ್ಯ ಸಮಯದಲ್ಲಿ ಅಂದ್ರೆ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲ ಕೊಡಲಿಲ್ಲ ಎಂಬ ಹತಾಶೆಯೂ ಇಲ್ಲಿ ಇಣುಕಿದೆ. ಹಾಗಿದ್ರೆ ಒಟ್ಟು ಅರ್ಥ ವಿಧಾಸಭೆ ಚುನಾವಣೆ ಯಲ್ಲಿ ತಾವು ನಿರೀಕ್ಷೆ ಮಾಡಿದ್ದ ಗೆಲುವು ದಕ್ಕದಿರುವುದಕ್ಕೆ ಲಿಂಗಾಯತ ಸಮುದಾಯದ ಮುಖಂಡರನ್ನೇ ಕಾರಣ ಮಾಡಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯರ ಈ ಅಭಿಪ್ರಾಯವನ್ನು ಲಿಂಗಾಯತ ಸಮುದಾಯ ಯಾವ ರೀತಿ ಸ್ವೀಕರಿಸುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *