ಬಾಗಲಕೋಟೆ: ತನ್ನ ವಿರುದ್ಧ ಕನಕ ಪೀಠದ ಗುರುಗಳು ನೀಡಿದ ಹೇಳಿಕೆಗೆ ಇಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕನಕ ಪೀಠ ಗುರುಗಳಾದ ಈಶ್ವರನಂದ ಸ್ವಾಮೀಜಿಯವರು, ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವುದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಅಲ್ಲದೇ ಸಮುದಾಯದ ಯಾವೊಬ್ಬ ಶಾಸಕರ ಪರವು ದನಿ ಎತ್ತಲಿಲ್ಲ. ಸಿದ್ದರಾಮಯ್ಯನವರು ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ಹೇಳಿಕೆ ನೀಡಿದ್ದರು.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಪ್ರತಿಕ್ರಿಯಿಸಿ, ಸ್ವಾಮೀಜಿಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ನನ್ನ ತಂದೆ ಯಾವಾಗಲೂ ಅದೇ ರೀತಿ ಹೇಳುತ್ತಿದ್ದರು ಎಂದು ನೆನಪಿಸಿಕೊಂಡು, ಸ್ವಾಮೀಜಿಯವರ ಹೇಳಿಕೆಗೆ ನಿರ್ಲಕ್ಷದ ಉತ್ತರವನ್ನು ನೀಡಿದ್ದಾರೆ.
ಕಾಂಗ್ರೆಸ್ ಅತೃಪ್ತ ಶಾಸಕರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಮಳೆ ನಿಂತ ಮೇಲೆ ಮರದ ಹನಿ ಬೀಳುವ ಹಾಗೇ ಅಲ್ಲಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಎಲ್ಲಾ ಅತೃಪ್ತ ಶಾಸಕರ ಜೊತೆ ಸಂಪರ್ಕದಲ್ಲಿ ಇದ್ದೇನೆ. ಯಾವುದೇ ತೊಂದರೆ ಇಲ್ಲ, ಎಲ್ಲಾ ಶಾಸಕರ ಅಸಮಾಧಾನ ಶಮನವಾಗಿದೆ ಎಂದು ಅತೃಪ್ತ ಶಾಸಕರ ಬಗ್ಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಬಾದಾಮಿ ಪ್ರವಾಸ ಕುರಿತು ಜಿ.ಪರಮೇಶ್ವರ್ ನೀಡಿದ ವ್ಯಂಗ್ಯ ಹೇಳಿಕೆ ಉತ್ತರಿಸದೆ, ನೋ ಕಮೆಂಟ್ಸ್ ಎಂದು ಹೇಳಿ, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಸಲ್ಲಿಸಿದ್ದ ಪ್ರಸ್ಥಾವನೆಯನ್ನು ಕೇಂದ್ರ ಸರ್ಕಾರ ಹಿಂತಿರುಗಿಸಿದ್ದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ. ಈ ಕುರಿತು ಸರ್ಕಾರವೇ ಮುಂದಿನ ಕ್ರಮ ಕೈಗೊಳ್ಳುತ್ತದೆ. ಸಮನ್ವಯ ಸಮಿತಿಯಲ್ಲಿ ಭಾಗಿಯಾಗಿ ಚರ್ಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.