ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಆಗಿದ್ದಾಗ ಸಿದ್ದರಾಮಯ್ಯ ಕ್ರಮಕೈಗೊಳ್ಳಲಿಲ್ಲ ಎಂಬ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ, ಈಶ್ವರಪ್ಪ ಅವರು ಆರೋಪಿಸಿದಂತೆ ನಾನು ಆ ರೀತಿ ಹೇಳಿಕೆ ನೀಡಿರಲು ಸಾಧ್ಯವೇ ಇಲ್ಲ. ಒಂದು ವೇಳೆ ನಾನು ಹಾಗೇ ಹೇಳಿದ್ದರೆ ಅವರು ಯಾಕೆ ನನ್ನನ್ನು ಪ್ರಶ್ನೆ ಮಾಡಲಿಲ್ಲ? ಪ್ರತಿಪಕ್ಷದಲ್ಲಿ ಯಾಕೆ ಸುಮ್ಮನೆ ಕುಳಿತಿದ್ದರು ಎಂದು ಪ್ರಶ್ನಿಸಿ ಕಿಡಿಕಾರಿದರು.
ಈಶ್ವರಪ್ಪ ಹೇಳಿದ್ದೇನು?:
ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು. ಈ ಘಟನೆಯಿಂದ ನನಗೆ ತುಂಬಾ ದುಃಖ ತಂದಿತ್ತು. ನನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾದಷ್ಟು ನೋವಾಗಿತ್ತು. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಏನ್ ಮಾಡಬೇಕು ಇವಾಗ ಅಂದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾಗಿದ್ದರೆ ಏನ್ಮಾಡ್ತೀಯಾ ಎಂದು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈಶ್ವರಪ್ಪ ಅವರ ಹೇಳಿಕೆಯ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿದೆ.