ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಯಶಸ್ವಿಯಾಗಿ ನಡೆಸಲು ರಚನೆಯಾಗಿರುವ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ತಮ್ಮ ಆಪ್ತರ ಜೊತೆ ಭಾನುವಾರ ಬೆಳಿಗ್ಗೆ ನಡೆಸಿದ ಮಾತುಕತೆಯ ವಿಡಿಯೋ ಬಹಿರಂಗವಾಗಿದೆ.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರು, ಶಾಸಕರಾದ ಬೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ರಹೀಂ ಖಾನ್, ಮುನಿರತ್ನ, ಹಾಗೂ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಜೊತೆ ನಡೆಸಿದ ಸಂಭಾಷಣೆಯ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ರೈತರ ಸಾಲ ಮನ್ನಾ, ಹೊಸ ಬಜೆಟ್ ಮಂಡನೆ, ಸಂಪುಟ ವಿಸ್ತರಣೆ ವೇಳೆ ಉಂಟಾದ ಅತೃಪ್ತಿ ಬಗ್ಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡಿರುವ ವಿಚಾರ ವಿಡಿಯೋದಲ್ಲಿದೆ.
Advertisement
Advertisement
ಸಿದ್ದರಾಮಯ್ಯ ಹೇಳಿದ್ದು ಏನು?
ಕೊಠಡಿಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದಾಗ ಶಾಸಕರು ಹೊಸ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಮಾಜಿ ಸಿಎಂ, “ಏನ್ ಬಜೆಟ್ ಮಂಡನೆ ಮಾಡ್ತಾರೆ. ಒಂದೇ ಪಾರ್ಟಿ ಬಂದ್ರೆ ಬಜೆಟ್ ಮಂಡಿಸಿಕೊಳ್ಳಲಿ. ನಮ್ ಸಪೋರ್ಟ್‍ನಿಂದ್ಲೇ ಅವ್ರು ಮುಖ್ಯಮಂತ್ರಿಯಾಗಿರೋದು. ರಾಹುಲ್ ಗಾಂಧಿ ಹತ್ರ ಹೋಗಿ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಕೊಟ್ಬಿಟ್ಟಿದ್ದಾರೆ ಅಂತೇಳ್ತಾರೆ. ಪರಮೇಶ್ವರ್ ಕೂಡ ಹೊಸ ಸರ್ಕಾರ ಬಂದ್ಮೇಲೆ ಸ್ವಾಭಾವಿಕವಾಗಿ ಮಂಡಿಸ್ಬೇಕು.ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಅವರು ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಮಂಡಿಸಿದ ಬಜೆಟ್ ಇದೆ. ಅದನ್ನೇ ಮುಂದುವರಿಸಲಿ” ಎಂದು ಹೇಳಿದ್ದಾರೆ.
Advertisement
ಇನ್ನು ಮುಂದಕ್ಕೆ ಹೋದ ಸಿದ್ದರಾಮಯ್ಯ, “ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಮುಂದಿನ ವರ್ಷ ಅವರಿದ್ದರೆ ಬಜೆಟ್ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಸ್ವಲ್ಪ ಕಾಮನ್ ಸೆನ್ಸ್ ಇಟ್ಕೊಂಡು. ಡೀಪಾಗಿ ಯೋಚನೆ ಮಾಡ್ಬೇಕು. ಇದು ಸಮ್ಮಿಶ್ರ ಸರ್ಕಾರ. ಮುಂದಿನ ವರ್ಷ ಮುಂದಿನ ವರ್ಷ ಬೇಕಾದ್ರೆ ಬಜೆಟ್ ಮಂಡಿಸಿಕೊಳ್ಳಲಿ. ಆದ್ರೆ ಇನ್ನು ಕಾಮನ್ ಮಿನಿಮಮ್ ಪ್ರೋಗ್ರಾಂ ಪ್ಲಾನೇ ಮಾಡಿಲ್ಲ. ಈಗಾಗಲೇ ಅವರು ಬಜೆಟ್‍ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ” ಎಂದು ನೇರವಾಗಿಯೇ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಈ ವೇಳೆ ಶಾಸಕರೊಬ್ಬರು, “ಎಂ.ಬಿ.ಪಾಟೀಲ ಮತ್ತು ಡಾ.ಕೆ.ಸುಧಾಕರ್ ಮತ್ತೆ ಸಭೆ ಕರೆದಿದ್ದಾರೆ ಸಾರ್” ಎಂದಾಗ ಸಿದ್ದರಾಮಯ್ಯ, “ಮೀಟಿಂಗ್ ಯಾಕಂತೆ?ಏನ್ ಹೇಳಿದ್ರು ಮೀಟಿಂಗ್‍ನಲ್ಲಿ” ಎಂದು ಪ್ರಶ್ನಿಸಿದ್ದಾರೆ.
ನಂತರ ಮುಂದುವರಿಸಿ,” ಸಭೆ ಮಾಡಿದ್ರೆ ಮಂತ್ರಿಗಿರಿ ಸಿಗುತ್ತಾ? ಸಿಗೋದು ತಪ್ಪಿಹೋಗುತ್ತೆ. ರಾಹುಲ್ ಗಾಂಧಿ ಒಪ್ಪಿಗೆ ನೀಡಿದ ಪಟ್ಟಿ. ಸಭೆ ನಡೆಸಿದರೆ ರಾಹುಲ್ ಗಾಂಧಿ ವಿರುದ್ಧ ಹೋದಂತೆ ಆಗುವುದಿಲ್ಲವೇ? ರಾಹುಲ್ ಗಾಂಧಿ ಕಾಂಗ್ರೆಸ್ ಸರ್ವೋಚ್ಚ ನಾಯಕರಾಗಿದ್ದಾರೆ. ಅತೃಪ್ತಿ ಬೇರೆ, ಸಭೆ ನಡೆಸೋದು ಬೇರೆ. ಅತೃಪ್ತಿ ವ್ಯಕ್ತಪಡಿಸುವುದಕ್ಕೆ ಬೇರೆ ಮಾರ್ಗವಿದೆ” ಎಂದು ಹೇಳಿದ್ದಾರೆ.
ಸಾಲ ಮನ್ನಾ ಬೇಡ:
“ರೈತರ ಸಾಲ ಮನ್ನಾ ಮಾಡುವುದು ಬೇಡ. ಅದರ ಬದಲು ಎಲ್ಲ ರೈತರಿಗೂ ಅನುಕೂಲ ಆಗುವಂತಹ ಯೋಜನೆ ಮಾಡಲಿ. ಒಣ ಬೇಸಾಯ ಮಾಡುವವರಿಗೆ ಪ್ರೋತ್ಸಾಹಧನ ನೀಡುವ ಹಿಂದಿನ ಸರ್ಕಾರದ ಯೋಜನೆಯನ್ನು ಮುಂದುವರಿಸುವುದು ಉತ್ತಮ. ನಾನು ಹಳ್ಳಿಯಿಂದಲೇ ಬಂದಿದ್ದೇನೆ. ನಮ್ಮೂರಲ್ಲಿ ಸಾಲ ಮಾಡಿ ಸತ್ತವರನ್ನು ಒಬ್ಬರನ್ನೂ ನೋಡಿಲ್ಲ” ಎಂದು ಸಿದ್ದರಾಮಯ್ಯ ಹೇಳಿದಾಗ ಯಶವಂತಪುರ ಶಾಸಕ ಸೋಮಶೇಖರ್, ಈ ಸಾಲ ಮನ್ನಾ ಅನ್ನೋದು ದೊಡ್ಡ ದೋಖಾ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಹಾಸನ ಬಿಟ್ಟು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರದ ಬಗ್ಗೆ ಸಿದ್ದರಾಮಯ್ಯ, “ಏನೋ ಎಲ್ಲವನ್ನೂ ಆಕ್ರಮಿಸಿಕೊಳ್ಳುತ್ತೇವೆ ಅಂತ ಹೊರಟಿದ್ದಾರೆ. ನೋಡೋಣ ಬಿಡು” ಎಂದು ಹೇಳಿದ್ದಾರೆ.