Connect with us

Bengaluru City

ಪರಮೇಶ್ವರ್ ಜೊತೆ ಡಿಶುಂ ಡಿಶುಂ ಸುಳ್ಳು – ಖಾತೆ ಇಲ್ಲದ ಅಸಮಾಧಾನವಿದೆ ಅಂದ್ರು ಸಿದ್ದರಾಮಯ್ಯ

Published

on

ಬೆಂಗಳೂರು: ಗೃಹ ಖಾತೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಜೊತೆ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಿನ್ನೆಯ ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ-ವಾಗ್ವಾದ ನಡೆದಿಲ್ಲ. ಮಾಧ್ಯಮಗಳಲ್ಲಿ ಬಂದಂತೆ ಜಗಳವಾಡಲು ನಮ್ಮಲ್ಲಿ ಯಾರೂ ಮಕ್ಕಳಿಲ್ಲ. ನನ್ನ ಹಾಗೂ ಪರಮೇಶ್ವರ್ ಜೊತೆ ಯಾವುದೇ ಅಸಮಾಧಾನವಿಲ್ಲ. ಸಮಾನವಾಗಿ ಖಾತೆ ಹಂಚಿಕೆ ಮಾಡಲಾಗಿದೆ ಅಂತ ಸ್ಪಷ್ಟ ಪಡಿಸಿದ್ದಾರೆ.

ಇದೇ ವೇಳೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡಲ್ಲ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಜಾರಕಿಹೊಳಿಗೆ ಬೇಸರವಿದೆ. ನನಗೂ ಖಾತೆ ಇಲ್ಲ ಅಂತ ಬೇಸರವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಖಾತೆ ಹಂಚಿಕೆ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಕಿತ್ತಾಟ!

ಟ್ವೀಟ್ ನಲ್ಲೇನಿದೆ..?
ಡಾ.ಜಿ.ಪರಮೇಶ್ವರ್, ನನ್ನ ನಡುವೆ ಭಿನ್ನಾಭಿಪ್ರಾಯವೇ ಇಲ್ಲ. ನಿನ್ನೆಯ ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ-ವಾಗ್ವಾದ ನಡೆದಿಲ್ಲ. ಇದನ್ನು ಹೇಳಿದವರು ಯಾರು? ವಿರೋಧ ಪಕ್ಷಗಳ ಕೆಲವು ನಾಯಕರು ಹತಾಶರಾಗಿದ್ದಾರೆ.

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆ ಸೌಹಾರ್ದತಯುತವಾಗಿಯೇ ನಡೆದಿದೆ. ಸಭೆಯಲ್ಲಿದ್ದ ನಾಯಕರೆಲ್ಲ ಹಿರಿಯರು, ಅನುಭವಿಗಳು, ಈ ರೀತಿ ಜಗಳವಾಡಲು ನಮ್ಮಲ್ಲಿ ಯಾರೂ ಮಕ್ಕಳಿಲ್ಲ. ಕಪೋಲ ಕಲ್ಪಿತ ಸುದ್ದಿಗಳನ್ನು ನಂಬಬೇಡಿ, ಹರಡಬೇಡಿ ಅಂತ ತಿಳಿಸಿದ್ದಾರೆ.

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಎಲ್ಲ ನಾಯಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕೆ.ಸಿ.ವೇಣುಗೋಪಾಲ್ ಅವರು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತಾರೆ. ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ಕೈಗೊಳ್ಳುತ್ತಾರೆ ಅಂದಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಕಾಲ ನನ್ನ ಮತ್ತು ಡಾ.ಪರಮೇಶ್ವರ್ ಸಂಬಂಧ ಕೆಡಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳ ನಾಯಕರು ಮಾಡುತ್ತಲೇ ಇದ್ದರು. ಅದು ಈಗಲೂ ಮುಂದುವರಿದಿದೆ. ಅಂತಹ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಇಂತಹ ಸುದ್ದಿಗಳನ್ನು ಕೇಳಿ ನಾವಿಬ್ಬರೂ ನಕ್ಕು ಸುಮ್ಮನಾಗುತ್ತೇವೆ ಅಂದಿದ್ದಾರೆ.

ರಮೇಶ್ ಜಾರಕಿಹೊಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಹಲವಾರು ವರ್ಷಗಳಿಂದ ನನಗೆ ಗೊತ್ತು. ರಮೇಶ್ ಅಪ್ಪಟ ಕಾಂಗ್ರೆಸಿಗ, ಅವರು ಪಕ್ಷ ಬಿಟ್ಟುಹೋಗುವುದಿಲ್ಲ. ಬಿಜೆಪಿ ಪ್ರಯತ್ನ ಯಶಸ್ಸಾಗುವುದಿಲ್ಲ ಅಂತ ಕಿಡಿಕಾರಿದ್ದಾರೆ.

ಉಮೇಶ್ ಕತ್ತಿ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಶಾಸಕ ಉಮೇಶ್ ಕತ್ತಿಯವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಅವರ ಅಧ್ಯಕ್ಷರಾದ ಯಡಿಯೂರಪ್ಪನವರೇ ಕತ್ತಿಯವರಿಗೆ ಬುದ್ದಿ ಹೇಳಿದ್ದಾರೆ. ಸರ್ಕಾರ ಪತನದ ಕನಸು ಕೈ ಬಿಟ್ಟು, ಮೊದಲು ಅವರೊಳಗಿನ ಭಿನ್ನಾಭಿಪ್ರಾಯವನ್ನು ಸರಿಮಾಡಿಕೊಳ್ಳಲಿ ಅಂತ ಶಾಸಕರ ವಿರುದ್ಧ ಗರಂ ಆಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *