ಬೆಂಗಳೂರು: ನಾನು ಯಾಕೆ ಕಾಂಗ್ರೆಸ್ ಪಕ್ಷ ತೊರೆದೆ? ಯಾಕೆ ಬಿಜೆಪಿ ಸೇರಿದೆ? ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಕವಾಗಿದ್ದು ಯಾಕೆ? ಮೋದಿಯವರು ನನಗೆ ಇಷ್ಟ ಯಾಕೆ? ಕುಟುಂಬ ರಾಜಕಾರಣದ ಬಗ್ಗೆ ತನ್ನ ನಿಲುವು ಏನು ಎನ್ನುವುದನ್ನು ಎಸ್‍ಎಂ ಕೃಷ್ಣ ಮಾಧ್ಯಮಗಳ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ಯೋಚನೆ ಮಾಡಿ ಕಾಂಗ್ರೆಸ್ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೆ. ಅನುವಂಶೀಯ ರಾಜಕಾರಣವನ್ನು ನಾನು ವಿರೋಧಿಸಿಕೊಂಡು ಬಂದಿದ್ದೇನೆ. ಅರ್ಹತೆ ಇದ್ದರೆ ಅನುವಂಶೀಯ ರಾಜಕಾರಣ ತಪ್ಪಿಲ್ಲ. ಅರ್ಹತೆ ಇಲ್ಲದಿದ್ದರೆ ಕೇವಲ ಹುಟ್ಟಿನಿಂದ, ಕುಟುಂಬದ ಹಿನ್ನೆಲೆಯಿಂದ ಅನುಂಶೀಯ ರಾಜಕೀಯ ಮಾಡುವುದು ತಪ್ಪು ಎಂದು ಹೇಳಿದ್ರು.
Advertisement
Advertisement
ವಂಶಪಾರಂಪರ್ಯ ರಾಜಕಾರಣ ಹಿಡಿಸಲಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟು ಬಂದೆ. ಅರ್ಹತೆ ಇದ್ದರೆ ಅದಕ್ಕೆ ನಾನು ಅರ್ಜಿ ಹಾಕ್ತೇನೆ. ರಾಜೀವ್ ಗಾಂಧಿ ಜೊತೆ ಹೋಗುವುದಕ್ಕೆ ಪೂರ್ಣ ಪ್ರಮಾಣದ ಸಹಕಾರ ಸಿಕ್ಕಿತ್ತು. ರಾಜೀವ್ ಗಾಂಧಿಯವರಿಗೆ ವಂಶ ರಾಜಕಾರಣದ ಅರ್ಹತೆ ಇತ್ತು. ಆದ್ರೆ ಈಗ ಕಾಂಗ್ರೆಸ್ ನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಅಲ್ಲಿ ಉಳಿಯುವ ಸಾಧ್ಯತೆ ಇಲ್ಲ ಎಂಬ ತೀರ್ಮಾನ ಮಾಡಿದೆ. ಆಗ ಕಾಂಗ್ರೆಸ್ ಜೊತೆಗಿನ ಸಂಬಂಧ ಕಡಿದುಕೊಂಡು ಹೊರ ಬಂದೆ. ಹಿಂಬಾಗಿಲಿನಿಂದ ಮುಂಬಾಗಿಲಿನಿಂದ ಬಂದೆ ಎಂದು ಅಲ್ಲ. 1999 ರಲ್ಲಿ ರಾಜ್ಯಾದ್ಯಂತ ಓಡಾಡಿ, 132 ಶಾಸಕರನ್ನ ಗೆಲ್ಲಿಸಿಕೊಂಡು ಬಂದೆ. ಈ ಹಿರಿಮೆ ನನ್ನ ಹಿಂದೆ ಇದೆ. ಬಿಜೆಪಿ ಜೊತೆ ಸೇರಿಕೊಂಡು ರಾತ್ರೋರಾತ್ರಿ ಸಿಎಂ ಆದ್ರಲ್ಲಾ ಅದು ಹಿಂಬಾಗಿಲು ಎಂದು ಪರೋಕ್ಷವಾಗಿ ಸಿಎಂ ಹೆಚ್‍ಡಿಕೆಗೆ ಟಾಂಗ್ ಕೊಟ್ಟರು.
Advertisement
ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದೆ:
ನನ್ನನ್ನು ಕರ್ನಾಟಕದ ರಾಜಕಾರಣದಿಂದ ಹೊರಗೆ ಹಾಕಬೇಕೆಂಬ ಹುನ್ನಾರ ನಡೆದಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ಎಸ್.ಎಂ.ಕೃಷ್ಣ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರಾದರೂ ಸಿಎಂ ಆಗಲಿ ಎಂದು ಜೆಡಿಎಸ್ ಷರತ್ತು ವಿಧಿಸಿತ್ತು. ಈ ಕಾರಣಕ್ಕಾಗಿ ನನ್ನನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು. ಬೆಂಗಳೂರು ಅಭಿವೃದ್ಧಿಯ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ನನ್ನ ಅವಧಿಯಲ್ಲಿ ಪ್ರಾರಂಭವಾದ ಯೋಜನೆಗಳು ಅದೇ ವೇಗದಲ್ಲಿ ಮುಂದುವರಿದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ಆದರೆ ನನ್ನ ನಂತರ ಅಧಿಕಾರಕ್ಕೆ ಬಂದವರಿಗೆ ಅದು ಬೇಕಾಗಿರಲಿಲ್ಲ ಅಂದ್ರು.
Advertisement
ಮೋದಿಯಿಂದಾಗಿ ಬಿಜೆಪಿಗೆ ಬಂದೆ:
ನರೇಂದ್ರ ಮೋದಿಯವರೇ ನಾನು ಬಿಜೆಪಿಗೆ ಸೇರಲು ಮೂಲ ಕಾರಣ. ನಾನು ಬಿಜೆಪಿ ಸೇರಿದಾಗಿಂದ ಇದನ್ನು ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದೇನೆ. ಮೋದಿಯವರದ್ದು ಅನುವಂಶೀಯ ರಾಜಕೀಯ ಅಲ್ಲ. ಮೋದಿಯವರು ಗುಜರಾತಿನಿಂದ ಒಬ್ಬರೇ ಬಂದವರು. ತಮ್ಮ ವಂಶದವರಿಗೆ ಎಂದೂ ಮೋದಿಯವರು ಯಾವುದಾದ್ರೂ ಸ್ಥಾನದ ಮೇಲೆ ಕರ್ಚೀಫ್ ಇಟ್ಟವರಲ್ಲ. ಇದು ನನ್ನನ್ನು ಆಕರ್ಷಿಸಿತು. ಕಳೆದ ಐದು ವರ್ಷದಲ್ಲಿ ಮೋದಿಯವರು ಕಳಂಕರಹಿತ, ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟರು. ಇದರ ಆಧಾರದಲ್ಲಿ ಮತ್ತೆ ಮೋದಿಯವರನ್ನು ಗೆಲ್ಲಿಸಬೇಕಿದೆ ಎಂದರು.
ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು:
ವರದಿಯೊಂದರ ಪ್ರಕಾರ ಕ್ಷಿಪ್ರಗತಿಯಲ್ಲಿ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಕಳೆದ ಐದು ವರ್ಷಗಳ ಸುಧಾರಣೆ ಬೇರೆ ದೇಶಗಳನ್ನೂ ಆಕರ್ಷಿಸಿದೆ. ನರೇಂದ್ರ ಮೋದಿಯವರು ಇನ್ನೈದು ವರ್ಷ ದೇಶದ ನಾಯಕರಾಗಬೇಕು. ದೇಶ ಕವಲು ದಾರಿಯಲ್ಲಿದೆ. ಮೋದಿ ದೇಶದ ಪ್ರಗತಿಯನ್ನು ಒಂದು ಮಟ್ಟಕ್ಕೆ ತಂದಿದ್ದಾರೆ. ಜಿಡಿಪಿ ಸಮಾಧಾನಕರವಾಗಿದೆ ಅಂದ್ರು.
“ಬಿಜೆಪಿ ಅಂದ್ರೆ ಮೋದಿ, ಮೋದಿ ಅಂದ್ರೆ ಬಿಜೆಪಿ. ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ” ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತೇನೆ. ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬ ನಾಯಕರು ಇರುತ್ತಾರೆ. ನೋಟು ಅಮಾನ್ಯೀಕರಣ ಆದಾಗ ಅದನ್ನು ನಾನು ಸ್ವಾಗತ ಮಾಡಿದ್ದೆ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಮಾತನ್ನ ಒಪ್ಪಿಕೊಳ್ಳಲಿಲ್ಲ. ಸರ್ಜಿಕಲ್ ಸ್ಟ್ರೈಕ್ ನ್ನ ಒಪ್ಪಿಕೊಂಡಿದ್ದೇನೆ. ಪಾಕಿಸ್ತಾನಕ್ಕೆ ಇಂತಹ ಕ್ರಮದಿಂದಲೇ ಬುದ್ಧಿ ಹೇಳಬೇಕು ಎಂದು ತಿಳಿಸಿದ್ರು.
ಕುಟುಂಬ ರಾಜಕಾರಣ:
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬ ರಾಜಕಾರಣ ವಿಚಾರದ ಕುರಿತು ಇದೇ ವೇಳೆ ತಿರುಗೇಟು ನೀಡಿದ ಎಸ್‍ಎಂಕೆ, ನಾನು ಮೊದಲಿಂದಲೂ ಕುಟುಂಬ ರಾಜಕಾರಣದ ವಿರೋಧಿ. ಇವರ ಕುಟುಂಬದಿಂದ ಮೂವರ ಸ್ಪರ್ಧೆಗೂ ನನ್ನ ವಿರೋಧ ಇದೆ ಅಂದ್ರು.
ರಾಹುಲ್ ಗಾಂಧಿ ವಯನಾಡು ಸ್ಪರ್ಧೆಗೆ ನನ್ನ ವಿರೋಧ ಇಲ್ಲ. ಅವರು ಎರಡಲ್ಲ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿ. ಅದು ಅವರ ಆಯ್ಕೆ. ಬಳ್ಳಾರಿಗೆ ಸೋನಿಯಾ ಗಾಂಧಿ ಬಂದಿದ್ದಾಗ ನಾನು ಸ್ವಾಗತಿಸಿದ್ದೆ. ರಾಹುಲ್ ವಯನಾಡಿಗೆ ಹೋಗಿದ್ದರಲ್ಲಿ ತಪ್ಪಿಲ್ಲ ಎಂದರು.
ಮುಂದೆ ನನ್ನ ಕುಟುಂಬದ ಯಾರಾದರೂ ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅದು ಅವರ ಇಚ್ಛೆಗೆ ಬಿಟ್ಟಿದ್ದು. ಅವರೆಲ್ಲ ಪ್ರೌಢಾವಸ್ಥೆಗೆ ತಲುಪಿದ್ದಾರೆ. ಸ್ವಯಂ ನಿರ್ಧಾರ ತೆಗೆದುಕೊಳ್ಳಬಲ್ಲರು. ನನ್ನ ತಮ್ಮನ ಮಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದಾರೆ. ಆದರೆ ಅದಕ್ಕೆ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ರು.
ಒಕ್ಕಲಿಗ ಸಂಘದ ಚುನಾವಣೆಯಲ್ಲ:
ಈಗ ನಡೆಯುತ್ತಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ. ಇದು ಭಾರತದ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಾಗಿದೆ. ಇದರಲ್ಲಿ ನಾನು ದೇವೇಗೌಡರ ಹಿಂದೆ ನಿಲ್ಲದೇ ಇರುವುದು ವಿಪರ್ಯಾಸ ಅಲ್ಲ ಅಂದ್ರು.
ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ವಿಚಾರ ಮಾತನಾಡಿದ ಅವರು, ಈಗ ನಾನು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್, ಜೆಡಿಎಸ್ ವಿರೋಧಿಯಾಗಿದ್ದೇನೆ. ಮಂಡ್ಯದಲ್ಲಿ ನಾನು ಏನು ನಿಲುವನ್ನು ತೆಗೆದುಕೊಳ್ಳಬಹುದು ಅನ್ನೋದು ನೀವೇ ಊಹೆ ಮಾಡಿ ಎಂದ ಅವರು, ಸದ್ಯದಲ್ಲೇ ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಭವಿಷ್ಯ:
ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆಯೇ ತರಾತುರಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದರು. ಅದೂ ಕೂಡ ಮಾಧ್ಯಮಗಳ ಮುಂದೆ ಪಾರದರ್ಶಕವಾದ ರೀತಿಯಲ್ಲಿ ಒಪ್ಪಂದ ಮಾಡಿಕೊಂಡರು. ಈಗ ಲೋಕಸಭಾ ಚುನಾವಣೆ ಬಳಿಕ ಈ ಮೈತ್ರಿ ಸರ್ಕಾರದ ಭವಿಷ್ಯ ಗೊತ್ತಾಗುತ್ತದೆ. ಪರೋಕ್ಷವಾಗಿ ಸಮ್ಮಿಶ್ರ ಸರಕಾರ ಚುನಾವಣೆ ಬಳಿಕ ಉಳಿಯಲ್ಲ ಎಂದು ಎಸ್‍ಎಂಕೆ ಭವಿಷ್ಯ ನುಡಿದ್ರು.