ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಇಂದು ವಿಧಿವಶರಾಗಿದ್ದಾರೆ.
ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 6.10ಕ್ಕೆ ಕೊನೆಯುಸಿರೆಳೆದಿದ್ದಾರೆ.
Advertisement
ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುನಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು.
Advertisement
ಕಾವೇರಿ ಆಸ್ಪತ್ರೆಯ ಮುಂದೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಆಸ್ಪತ್ರೆಯ ಸುತ್ತಮುತ್ತ 1,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
Advertisement
ಜಿಲ್ಲೆಗಳ ಪೊಲೀಸ್ ಠಾಣೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದು ಸಂಜೆ 6 ಗಂಟೆಯಿಂದಲೇ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಾಡುತ್ತಿದ್ದ ಮಳಿಗೆಗಳು ಬಂದ್ ಆಗಿವೆ. ಆಸ್ಪತ್ರೆ ಮತ್ತು ಗೋಪಾಲಪುರಂ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಣ್ಣಾ ವಿವಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Advertisement
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಕರುಣಾನಿಧಿ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಆಸ್ಪತ್ರೆ ಮತ್ತು ಗೋಪಾಲಪುರಂನ ಕರುಣಾನಿಧಿ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಬೆಂಬಲಿಗರು ಕರುಣಾನಿಧಿ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು.
ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.