ಬೆಂಗಳೂರು: ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು.
ನೆರೆ ಪರಿಹಾರ ತರಲು ಕೇಂದ್ರ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪನವರಿಗೆ ಸಮಯ ಇಲ್ಲ. ಆದರೆ ಚುನಾವಣೆ ಘೋಷಣೆಯಾದ ಕೂಡಲೇ ತರಾತುರಿಯಲ್ಲಿ ಯಡಿಯೂರಪ್ಪ ದೆಹಲಿಗೆ ಹೋದರು. ಅಲ್ಲಿ ಏನು ಚರ್ಚೆ ಆಗಿದೆ. ನೆರೆ ಪರಿಹಾರದ ಬಗ್ಗೆ ಚರ್ಚೆ ಆಗಿಲ್ಲ ಎಂದು ಎಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನರ್ಹರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಚರ್ಚೆ ಆಗಿದೆ. ಯಡಿಯೂರಪ್ಪ ಈ ಕೆಲಸ ಮಾಡದೇ ಹೋಗಿದ್ದರೆ ಅನರ್ಹರು ಯಡಿಯೂರಪ್ಪರ ಮೇಲೆ ದೈಹಿಕ ಹಲ್ಲೆಗೂ ಯತ್ನ ಮಾಡುತ್ತಿದ್ದರು. ಇದನ್ನು ತಪ್ಪಿಸಿಕೊಳ್ಳಲು ಬಿಎಸ್‍ವೈ ಅಮಿತ್ ಶಾ ಭೇಟಿಯಾಗಿದ್ದರು. ಈ ವಿಚಾರದಲ್ಲಿ ಚುನಾವಣಾ ಆಯೋಗದ ಈ ನಡೆ ಸರಿಯಲ್ಲ. ಈ ವ್ಯವಸ್ಥೆ ಮುಂದುವರಿದರೆ ಕರಾಳ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.