ದಯವಿಟ್ಟು ರಾಜ್ಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ: ಹೈಕಮಾಂಡ್‌ ನಡೆಗೆ ಸದಾನಂದಗೌಡ ಬೇಸರ

Public TV
2 Min Read
d.v.sadananda gowda

ಬೆಂಗಳೂರು: ರಾಜ್ಯ ನಾಯಕರ ವಿಚಾರವಾಗಿ ಬಿಜೆಪಿ ಹೈಕಮಾಂಡ್‌ ಅನುಸರಿಸುತ್ತಿರುವ ಧೋರಣೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ (D.V.Sadananda Gowda) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕರ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ಕೇಂದ್ರದ ನಾಯಕರಿಗೆ ಮನವಿ ಮಾಡ್ತೀನಿ. ಕರ್ನಾಟಕದ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ. ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರಬಹುದು. ಆದರೆ ಲೋಕಸಭಾ ಚುನಾವಣೆಗೆ ಡಬಲ್ ಕೊಡ್ತೀವಿ. ದಯವಿಟ್ಟು ವಿಶ್ವಾಸ ತೆಗೆದುಕೊಳ್ಳಿ. ರಾಜ್ಯಕ್ಕೆ ಬರದೆ, ರಾಜ್ಯದ ವಿಪಕ್ಷ ನಾಯಕರ ಆಯ್ಕೆ ಮಾಡದೆ ಬಿಡೋದು ಸರಿಯಲ್ಲ ಎಂದು ಹೈಕಮಾಂಡ್‌ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ಹೇಳಿತ್ತು: ಸದಾನಂದಗೌಡ ನಿವೃತ್ತಿ ಘೋಷಣೆಗೆ ಬಿಎಸ್‌ವೈ ಪ್ರತಿಕ್ರಿಯೆ

Narendra Modi Amit Shah 2

ತಮ್ಮ ಚುನಾವಣಾ ನಿವೃತ್ತಿ ಬಗ್ಗೆ ಮಾತನಾಡಿದ ಅವರು, ವಾಸ್ತವವಾಗಿ ರಾಷ್ಟ್ರೀಯ ನಾಯಕ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. ಯಾವುದೇ ಒತ್ತಡ ಇಲ್ಲ ಅಂತ. ನಾನು ಹನುಮಂತ ರೀತಿ ಎದೆ ಬಗೆದು ತೋರಿಸಲಾಗಲ್ಲ. ಸತ್ಯವನ್ನೇ ಹೇಳಿದ್ದೇನೆ.‌ ಕಠೋರವಾಗಿ ಹೇಳಿಲ್ಲ. ಯಾವುದೇ ಒತ್ತಡ ಇಲ್ಲ. ಯಾರ ಬಳಿಯೂ ಚರ್ಚೆ ಮಾಡಿಲ್ಲ. ನಾನು ನಿವೃತ್ತಿ ಆಗ್ತೇನೆ ಅಂತ 2019 ರಲ್ಲೇ ಹೇಳಿದ್ದೆ. ಆಗ ಪಕ್ಷ ಮತ್ತು ಸಂಘ ಈ ಬಾರಿ ಸ್ಪರ್ಧೆ ಮಾಡಿ ಅಂತ ಹೇಳಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನಾನು ರಾಜಕೀಯಕ್ಕೆ ಬಂದಾಗ ಚೇಲಾ ಆಗಿ ತಿರುಗಿಲ್ಲ. ಇವತ್ತಿನ ಈ ನಿಲುವು ನನ್ನ ಮನೆಯವರಿಗೆ ಬಿಟ್ಟು, ಯಾರ ಬಳಿಯೂ ಚರ್ಚೆ ಮಾಡಿ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.

ನಿಮ್ಮಲ್ಲೇ 13 ಜನರಿಗೆ ಟಿಕೆಟ್ ಇಲ್ಲ, ಸದಾನಂದಗೌಡರಿಗೂ ಟಿಕೆಟ್ ಇಲ್ಲ ಅಂತ ಚರ್ಚೆ ಮಾಡಿದ್ದರು ಎಂಬ ಮಾತು ನೂರಕ್ಕೆ ನೂರು ಸುಳ್ಳು. ಯಡಿಯೂರಪ್ಪ ಅವರು ವ್ಯತ್ಯಾಸ ಹೇಳಿಕೆ ನೀಡಿದ್ದರು. ಆದರೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದರು. ಹಾಗಾಗಿ ನಾನು ಅವರ ಬಗ್ಗೆಯೂ ಹೇಳಿಕೆ ನೀಡಲ್ಲ ಎಂದರು. ಇದನ್ನೂ ಓದಿ: ಕಲೆಕ್ಷನ್‍ನಲ್ಲೂ ಸಿಎಂ, ಡಿಸಿಎಂ ನಡುವೆ ತೀವ್ರ ಸ್ಪರ್ಧೆ: ಡಿ.ವಿ.ಸದಾನಂದಗೌಡ

ನಾವು ಮಂಡ್ಯ, ಹಾಸನ ಎಲ್ಲಾ ಕಡೆ ಪಕ್ಷದ ಕೆಲಸ ಮಾಡಿದ್ದೇವೆ. ರಾಜಕಾರಣದಲ್ಲಿ ನಾನೇ ಇರಬೇಕು, ನನ್ನ ಮಕ್ಕಳಿರಬೇಕು ಎನ್ನುವ ಭಾವನೆ ನನಗಿಲ್ಲ. ಕುಟುಂಬದ ರಾಜಕಾರಣ ಸರಿಯಲ್ಲ. ಸಕಾಲದಂತ ಕಾನೂನು ತಂದು ಭ್ರಷ್ಟಾಚಾರಕ್ಕೆ ಒಂದಷ್ಟು ಕಡಿವಾಣ ಹಾಕುವ ಕೆಲಸ ಮಾಡಿದ್ದೇವೆ. ಸದಾನಂದಗೌಡ ಯಾರ ಚೇಲ ಅಲ್ಲ. ಯಾರ ಒತ್ತಡಕ್ಕೂ ತೀರ್ಮಾನ ತೆಗೆದುಕೊಳ್ಳಲ್ಲ. ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಇದು ಜವಾಬ್ದಾರಿ ಅಂತ ತಿಳಿದಿದ್ದೇನೆ. ಕೋಟ್ಯಾಂತರ ಸದಸ್ಯರು ಇರುವ ಪಕ್ಷ. ಸದಾನಂದಗೌಡರಿಗೆ ಟಿಕೆಟ್ ಇಲ್ಲ ಅಂತ ಹೇಳಿದ್ದಾರೆ. 32 ಲಕ್ಷ ಮತದಾರರಿರುವ ಕ್ಷೇತ್ರ ನಮ್ಮದು. ಒಬ್ಬೇ ಒಬ್ಬ ಕಾರ್ಯಕರ್ತ ಸದಾನಂದಗೌಡ ಸರಿ ಇಲ್ಲ ಅಂತ ಹೇಳಿದ್ರೆ ನಾನು ಬೆಂಗಳೂರು ಬಿಟ್ಟುಬಿಡ್ತೀನಿ ಎಂದು ಸವಾಲು ಹಾಕಿದರು.

Share This Article