– ನೀರು ಬಿಟ್ರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಹೊಣೆ
ಬೆಂಗಳೂರು: ಕಾವೇರಿ (Cauvery Water) ವಿಚಾರದಲ್ಲಿ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ನಾಳೆ (ಮಂಗಳವಾರ) ಗೊಂದಲ ಇಲ್ಲದೇ ಬೆಂಗಳೂರು ಬಂದ್ ಆಗಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಬೆಂಗಳೂರು ಬಂದ್ ಗೆ (Bengaluru Bandh) ಕರೆ ಕೊಟ್ಟರು. ಹೊಟೇಲ್ ಮಾಲೀಕರು, ಸಂಘ ಸಂಸ್ಥೆಗಳಿಗೆ ಮನವಿ ಮಾಡ್ತೇವೆ, ಬೆಂಗಳೂರು ಬಂದ್ ಗೆ ಬೆಂಬಲ ಕೊಡಲಿ. ಹೊಟೇಲ್, ಅಂಗಡಿ ಮುಂಗಟ್ಟು ತೆರೆದು, ಕಾನೂನು ಸಮಸ್ಯೆ ಆದರೆ ಅದಕ್ಕೆ ನೀವೇ ಜವಾಬ್ದಾರರು. ಹಾಗಾಗಿ ಎಲ್ಲರೂ ಬೆಂಗಳೂರು ಬಂದ್‍ಗೆ ಬೆಂಬಲ ಕೊಡುವಂತೆ ಮನವಿ ಮಾಡ್ತೇನೆ ಎಂದರು.
ಇನ್ನು ಒಂದೇ ಒಂದು ಹನಿ ನೀರು ಸರ್ಕಾರ ಬಿಟ್ಟರೆ ಹೋರಾಟ ತೀವ್ರ ಆಗಲಿದೆ. ಇನ್ಮುಂದೆ ನೀರು ಬಿಟ್ರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಕಾರಣ ಆಗಲಿದೆ. ಸಿಎಂ, ಡಿಸಿಎಂ ಬೇಜವಾಬ್ದಾರಿಯಿಂದ ನೀರು ಬಿಟ್ಟು ಗೊಂದಲಕ್ಕೆ ಸಿಕ್ಕಿಸಲಾಗಿದೆ. ತಮಿಳುನಾಡಿನ ಏಜೆಂಟರಂತೆ ಇವರು ವರ್ತಿಸುತ್ತಿದ್ದಾರೆ. ಸರ್ಕಾರ ತಪ್ಪು ಮುಂದುವರಿಸಿದೆ. ಈಗಲಾದರೂ ನೀರು ಬಂದ್ ಮಾಡಿ ಬೆಂಗಳೂರಿನ ಜನತೆಗೆ ಕುಡಿಯುವ ನೀರನ್ನು ಒದಗಿಸಲಿ ಎಂದು ಹೇಳಿದರು.
ನಾಡಿದ್ದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಶಾಸಕರು, ಪರಿಷತ್ ಸದಸ್ಯರಿಂದ ಬಿಜೆಪಿ ಸತ್ಯಾಗ್ರಹ ನಡೆಸಲಿದೆ. ಜೆಡಿಎಸ್, ಬಿಜೆಪಿ ಎಲ್ಲರೂ ಒಟ್ಟಾಗಿ ಇರುತ್ತೇವೆ. ನಮ್ಮ ಹೋರಾಟಕ್ಕೆ ಜೆಡಿಎಸ್ ನಾಯಕರೂ ಕೈಜೋಡಿಸುವಂತೆ ಮನವಿ ಮಾಡ್ತೇನೆ. ಈ ಸರ್ಕಾರ ರಾಜ್ಯದ ಎಲ್ಲೆಡೆ ಸಾರಾಯಿ ಅಂಗಡಿ ತೆರೆಯಲು ಅವಕಾಶ ಕೊಡ್ತಿರೋದು ಅಕ್ಷಮ್ಯ ಅಪರಾಧ. ಕುಡಿಯಲು ನೀರು ಕೊಡಿ ಅಂದ್ರೆ ಸಾರಾಯಿ ಕೊಡ್ತಿದೆ. ತಕ್ಷಣ ಇದನ್ನ ನಿಲ್ಲಿಸಲಿ ಎಂದು ಬಿಎಸ್‍ವೈ ಆಗ್ರಹಿಸಿದರು.
ಮುನಿರತ್ನ ವ್ಯಂಗ್ಯ: ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ವಿಚಾರದ ಕುರಿತು ಸರ್ಕಾರದ ವಿರುದ್ಧ ಮಾಜಿ ಸಚಿವ ಮುನಿರತ್ನ ವ್ಯಂಗ್ಯವಾಡಿದ್ದಾರೆ. ಮಾಲ್, ರೇಷನ್ ಅಂಗಡಿ, ಕೊನೆಗೆ ಫುಟ್ ಪಾತ್‍ಗಳಲ್ಲಿ ಮದ್ಯ ಮಾರಾಟ ಮಾಡುವ ಕಾಲ ಬರಲಿದೆ. ಅವರು ಕೊಡುವ 2 ಸಾವಿರ ವಾಪಸ್ ಪಡೆಯುವ ದಾರಿ ಇದು. ಪ್ರತಿಯಾಗಿ ನಾಲ್ಕು ಸಾವಿರ ಪಡೆಯುವ ಪ್ಲಾನ್ ಇದು. ಹಣ ವಾಪಸ್ ಪಡೆಯಲು ಜನರನ್ನು ಕುಡುಕರನ್ನಾಗಿ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
Web Stories