ಮಂಗಳೂರು: ರಾಜಕಾರಣಿಗಳ ನಿದ್ದೆಯನ್ನೂ ಕೆಡಿಸಿದ್ಯಾ ಕೇತುಗ್ರಸ್ಥ ರಕ್ತಚಂದಿರ ಗ್ರಹಣ ಅನ್ನೋ ಪ್ರಶ್ನೆಯೊಂದು ಮಾಡಿದೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯಾಗದ ಮೊರೆ ಹೋಗಿದ್ದಾರೆ.
ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ನಡೆದ ಮಹಾರುದ್ರ ಯಾಗ, ಶತಚಂಡಿಕಾಯಾಗದಲ್ಲಿ ಬಿಎಸ್ ವೈ ಪಾಲ್ಗೊಂಡಿದ್ದಾರೆ. ಕಳೆದ ರವಿವಾರ, ಸೋಮವಾರ ಈ ಯಾಗ ನಡೆದಿದ್ದು, ಇದರಲ್ಲಿ ಪುತ್ರರಾದ ವಿಜಯೇಂದ್ರ, ರಾಘವೇಂದ್ರ ಕೂಡಾ ಭಾಗಿಯಾಗಿದ್ದರು. ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ, ಸುಳ್ಯ ಮೂಲದ ಪುರೋಹಿತರ ನೇತೃತ್ವದಲ್ಲಿ ಯಾಗ ನಡೆದಿತ್ತು.
ಶತಚಂಡಿಕ ಯಾಗ ಮಾಡಿದ್ರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಅನ್ನುವ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಇದೀಗ ಮತ್ತೆ ಮುಖ್ಯಮಂತ್ರಿ ಕುರ್ಚಿಗಾಗಿ ಯಾಗದ ಮೊರೆ ಹೋಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಕಳೆದ ವಾರ ಸೂಚನೆ ನೀಡಿದ್ದರು. ಜುಲೈ 27 ರಂದು ಸಂಭವಿಸಲಿರುವ ಗ್ರಹಣ ಅತ್ಯಂತ ಕೆಟ್ಟದ್ದು ಎಂದು ಹೇಳಲಾಗುತ್ತಿದೆ. ಗ್ರಹಣದ ಸಮಯದಲ್ಲಿ ಯಾವುದೇ ಅವಘಡಗಳು ಸಂಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದೊಂದನ್ನು ಬಿಟ್ಟು ಬೇರೆ ದಾರಿ ಇಲ್ಲ. ರಾಜ್ಯದ ಜನರೂ ಸಹ ಗ್ರಹಣದ ಬಗ್ಗೆ ಎಚ್ಚರ ವಹಿಸಬೇಕು. ಗ್ರಹಣ ಕಳೆದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದ್ದರು.