ಹುಬ್ಬಳ್ಳಿ: ಕೇಂದ್ರ ಸರ್ಕಾರ (Union Government) ಮಣಿಪುರದ ಗಲಭೆಗೆ ಆರಂಭದಲ್ಲೇ ಮೂಲ ಕಾರಣಗಳನ್ನ ಹುಡುಕಬೇಕಿತ್ತು. ಅಲ್ಲಿನ ರಾಜ್ಯ ಸರ್ಕಾರವೂ ಆರಂಭದಲ್ಲೇ ಗಲಭೆ ತಡೆಯುವಲ್ಲಿ ವಿಫಲವಾಗಿದ್ದು, ಸಿಎಂ ವೈಫಲ್ಯಗಳು ಎದ್ದು ಕಾಣುತ್ತಿವೆ. ಆದ್ದರಿಂದ ಮಣಿಪುರದಲ್ಲಿ ರಾಷ್ಟ್ರಪತಿ (President) ಆಡಳಿತ ಜಾರಿಗೆ ತರಬೇಕು ಎಂದು ವಿಧಾನಪರಿಷತ್ ಸದಸ್ಯರು ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಆಗ್ರಹಿಸಿದ್ದಾರೆ.
ಮಣಿಪುರದ ಗಲಭೆ (Manipur Violence) ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕಿತ್ತು. ಆದರೀಗ ಗಲಭೆ ವಿಕೋಪಕ್ಕೆ ತಿರುಗಿದೆ. ಮಣಿಪುರದ ಜನತೆ ಅಲ್ಲಿನ ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಸಿಎಂ ಬಿರೇನ್ ಸಿಂಗ್ (Biren Singh) ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿರುವುದು ಪೈಶಾಚಿಕ ಕೃತ್ಯ ನಾನು ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರ ಬರಿ ಬಾಯಿ ಮಾತಿಗೆ ಕಠಿಣ ಕ್ರಮ ಅನ್ನದೇ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು. ಇದನ್ನೂ ಓದಿ: 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ- ಜಾಮೀನು ನೀಡಿದ್ದಕ್ಕೆ ಹೈಕೋರ್ಟ್ ಕಿಡಿ
ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಕಾನೂನು ವಿಚಾರವಾಗಿ ಮಾತನಾಡಿ, ಇದೊಂದು ಚುನಾವಣೆಯ ಗಿಮಿಕ್. ಮೋದಿ ಸರ್ಕಾರ ತನ್ನ ಮೊದಲ ಪ್ರಣಾಳಿಕೆಯಲ್ಲಿಯೇ ಏಕರೂಪ ನಾಗರಿಕ ಕಾನೂನು ಘೋಷಣೆ ಮಾಡಿತ್ತು. ಆದ್ರೆ 9 ವರ್ಷಗಳಿಂದ ಜಾರಿ ಮಾಡದೇ ಈಗ ಚುನಾವಣೆಯ ಸಮಯದಲ್ಲಿ ಜಾರಿ ಮಾಡುತ್ತಾರೆ ಅಂದ್ರೆ ಏನರ್ಥ. ಯಾವುದೇ ಚರ್ಚೆ ಆಗದೇ ತರಾತುರಿಯಲ್ಲಿ ಕಾನೂನು ಜಾರಿ ಮಾಡುತ್ತಿರುವುದು ಚುನಾವಣೆ ಉದ್ದೇಶದಿಂದಲೇ ಹೊರತು ಬೇರೇನೂ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ತಲೆ ಕತ್ತರಿಸಿ ಬಿದಿರಿನ ಬೇಲಿಗೆ ನೇತುಹಾಕಿದ್ದ ದುಷ್ಕರ್ಮಿಗಳು – ಮಣಿಪುರದ ಮತ್ತೊಂದು ವೀಡಿಯೋ ವೈರಲ್
ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡಿದ ಶೆಟ್ಟರ್, ಹಾಲಿನ ದರ ಏರಿಕೆ ಬಹಳಷ್ಟು ದಿನಗಳಿಂದ ಇತ್ತು. ಈ ಬಗ್ಗೆ ರೈತ ಮತ್ತು ಸರಬರಾಜು ಮಾಡುವವರ ಜೊತೆಗೆ ಚರ್ಚೆ ನಡೆಯುತ್ತಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಏನಾದರೂ ಯೋಜನೆ ಜಾರಿ ಮಾಡಬೇಕಾದ್ರೆ ದರ ಏರಿಕೆ ಅನಿವಾರ್ಯವಾಗುತ್ತದೆ ಎಂದಿದ್ದಾರೆ.
Web Stories