ಬೆಂಗಳೂರು: ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಸವಾರರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕುವುದು ನಿಮಗೆ ಗೊತ್ತೇ ಇದೆ. ಜನರ ಮೇಲೆ ದಂಡ ಪ್ರಯೋಗ ಮಾಡುತ್ತಿರುವ ಪೊಲೀಸರು ನಾಯಕರ ವಿರುದ್ಧ ಮೌನಕ್ಕೆ ಶರಣಾಗಿದ್ದಾರೆ.
ಸೀಟ್ ಬೆಲ್ಟ್ ಧರಿಸದೇ ಇದ್ದರೆ ಕಾರು ಪ್ರಯಾಣಿಕರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸಂಚಾರ ನಿಯಮ ಉಲ್ಲಂಘಿಸಿದ್ದರೂ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದಾರೆ. ಸೆ.3 ರಂದು ಜೆಪಿ ನಗರದ ನಿವಾಸದಿಂದ ಕಾರಲ್ಲಿ ಹೊರಟ ಕುಮಾರಸ್ವಾಮಿ ಸೀಟ್ ಬೆಲ್ಟ್ ಧರಿಸುವ ಗೋಜಿಗೆ ಹೋಗಲಿಲ್ಲ. ಭದ್ರತೆಗೆ ಇದ್ದ ಪೊಲೀಸರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದು ಹೇಳಲು ಹೋಗಲಿಲ್ಲ.
ಕೇವಲ ಯಡಿಯೂರಪ್ಪ, ಕುಮಾರಸ್ವಾಮಿ ಮಾತ್ರವಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸಂಚಾರಿ ನಿಯಮ ಅನ್ವಯವಾಗುವುದಿಲ್ಲ. ಟ್ರಾಫಿಕ್ಸ್ ರೂಲ್ಸ್ ಲೆಕ್ಕಕ್ಕೆ ಇದ್ದಂಗೆ ಇಲ್ಲ. ಅವ್ರು ಕೂಡ ಕಾರಲ್ಲಿ ಕೂತ್ರೆ ಸೀಟ್ ಬೆಲ್ಟ್ ಹಾಕಿಕೊಳ್ಳುವುದೇ ಇಲ್ಲ
ಅನರ್ಹ ಶಾಸಕ ಬಿಸಿ ಪಾಟೀಲ್ ಈ ಹಿಂದೆ ಇನ್ಸ್‍ಪೆಕ್ಟರ್ ಆಗಿದ್ದವರು. ಎಲ್ಲರಿಗೂ ರೂಲ್ಸ್ ರೆಗ್ಯೂಲೇಷನ್ ಹೆಳಿಕೊಟ್ಟವರು. ಎಲ್ಲರಿಗಿಂತ ರೂಲ್ಸ್ ಬಗ್ಗೆ ಸ್ವಲ್ಪ ಜಾಸ್ತಿಯೇ ಅವರಿಗೆ ತಿಳಿದಿರುತ್ತದೆ. ಆದರೆ ಅವರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳದೇ ನಿಯಮ ಉಲ್ಲಂಘಿಸಿದ್ದಾರೆ.
ಕೇವಲ ಇವರಷ್ಟೇ ಅಲ್ಲದೇ ನಟಿ ತಾರಾ, ಐಪಿಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್, ಲಕ್ಷ್ಮಿ ನಾರಾಯಣ ಅವರ ವಾಹನದ ಚಾಲಕರು ಸೀಟ್ ಬೆಲ್ಟ್ ಧರಿಸದೇ ಬಿಂದಾಸ್ ಆಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇವರನ್ನು ನೋಡಿಯೂ ಟ್ರಾಫಿಕ್ ಪೊಲೀಸರು ಸೈಲೆಂಟ್ ಆಗಿದ್ದಾರೆ. ಇಲ್ಲಿ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?