ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ (Siddaramotsava) ಹೋಗಿದ್ದ ವ್ಯಕ್ತಿ ಕಾಣೆ ಆಗಿರುವ ಪ್ರಕರಣ ಸಂಬಂಧಿಸಿದಂತೆ ನಾಪತ್ತೆಯಾಗಿರುವ ವ್ಯಕ್ತಿಯ ಕುಟುಂಬ ಸದಸ್ಯರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ಅಡಿಹುಡಿ ಗ್ರಾಮದ ಗಿರಿಮಲ್ಲ ಖಂಡೇಕರ ಕಾಣೆಯಾಗಿರುವ ವ್ಯಕ್ತಿ. ನಿನ್ನೆ ಜಮಖಂಡಿಗೆ ಬಂದಿದ್ದ ಸಿದ್ದರಾಮಯ್ಯ (Siddaramaiah) ಅಡಿಹುಡಿ ಗ್ರಾಮಕ್ಕೆ ತೆರಳಿ ಗಿರಿಮಲ್ಲನ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ವೇಳೆ ಸಿದ್ದರಾಮಯ್ಯ ಅವರಿಗೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ (Aanand Nyamegowda) ಸಾಥ್ ನೀಡಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗಿರಿಮಲ್ಲ (GiriMalla) ಜೀವಂತ ಇದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಾನು ಎಸ್‍ಪಿ ಅವರಿಗೆ ಹೇಳಿ ಹುಡುಕಿಸಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್
ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ (Education) ಕೊಡೆಸುತ್ತೇನೆ. ನಿಮಗೆ ಎಲ್ಲ ಅಗತ್ಯ ಸಹಾಯ ಮಾಡುತ್ತೇನೆ. ಶಾಸಕ ಆನಂದ್ ನ್ಯಾಮಗೌಡ ಎಲ್ಲವನ್ನು ನೋಡಿಕೊಳ್ತಾರೆ. ಇದೇ ಸೆಪ್ಟಂಬರ್ 27 ಕ್ಕೆ ಮತ್ತೆ ಜಮಖಂಡಿಗೆ ಬರುತ್ತಿದ್ದೇನೆ. ಆಗ ಮತ್ತೆ ಬರುವೆ, ನಿಮಗೆ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅಭಯ ನೀಡಿದ್ದಾರೆ.
ಆಗಸ್ಟ್ 2 ರಂದು ಗ್ರಾಮದ ಜನರ ಜೊತೆ ಬಸ್ ನಲ್ಲಿ ದಾವಣಗೆರೆಗೆ ಸಿದ್ದರಾಮೋತ್ಸವಕ್ಕೆ ತೆರಳಿದ್ದ ಗಿರಿಮಲ್ಲ ವಾಪಸ್ ಊರಿಗೆ ಬಂದಿಲ್ಲ. ಈವರೆಗೂ ಗಿರಿಮಲ್ಲ ಎಲ್ಲಿದ್ದಾನೆ ಎನ್ನುವ ಮಾಹಿತಿ ಕೂಡ ಇಲ್ಲ. ಹೀಗಾಗಿ ಆತನ ಕುಟುಂಬ ದಾವಣಗೆರೆಗೆ ತೆರಳಿ ಮನೆ ಮನೆಗೆ ತೆರಳಿ ಫೋಟೋ ತೋರಿಸಿ ಹುಡುಕಾಟ ನಡೆಸುತ್ತಿದೆ.