ಬಾಗಲಕೋಟೆ: ನಾನೇನಾದ್ರು ಮುಖ್ಯಮಂತ್ರಿ ಆಗಿದ್ದಿದ್ದರೆ ನೆರೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮುಂದೆ ಧರಣಿ ಕೂರುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಕಾಲದಲ್ಲಿ ಮಾತೆತ್ತಿದರೆ ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡು ಆರು ತಿಂಗಳು ಕಳೆಯಲಿ. ಆಮೇಲೆ ಬೀದಿಗೆ ಇಳಿದು ಹೋರಾಟ ಮಾಡುತ್ತೇನೆ ಎಂದರು.
Advertisement
Advertisement
ನನ್ನ ಕ್ಷೇತ್ರಕ್ಕೆ ಗೋವನಕೊಪ್ಪ ಪಂಚಾಯಿತಿ ಮಾಡಲು ಸಿಎಂ ಯಡಿಯೂರಪ್ಪ ಅವರು ಮನಸ್ಸು ಮಾಡಲಿಲ್ಲ. ಎಲ್ಲಾ ಫೈಲ್ ಓಕೆ ಆಗಿದ್ದರೂ ಕ್ಯಾನ್ಸಲ್ ಮಾಡಿದರು. ಇರಲಿ, ನಿಮ್ಮೂರನ್ನ ಸ್ವಂತ ಪಂಚಾಯಿತಿ ಮಾಡುತ್ತೇನೆ. ಇದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. ಎಂದು ಗೋವನಕೊಪ್ಪ ಗ್ರಾಮಸ್ಥರ ಮುಂದೆ ಅಸಮಾಧಾನ ಹೊರಹಾಕಿದರು.
Advertisement
ಈ ವೇಳೆ ಗ್ರಾಮಸ್ಥನೊಬ್ಬ ಕೆಲಸ ಮಾಡಿ ಅಂತ ಹೇಳಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಾನು ಕೊಟ್ಟ ಭರವಸೆಯಂತೆ ಕೆಲಸ ಮಾಡಿದ್ದೇನೆ. ಆದರೂ ಮತ್ತೆ ಸಿಎಂ ಆಗಲು ಬಿಡಲಿಲ್ಲ. ಕೆಲಸ ಮಾಡದೇ ಇದ್ದರೂ ಬಿಜೆಪಿಗೆ ಮತ ಹಾಕುತ್ತಿರಾ ಎಂದು ಸೋಲಿನ ಬೇಸರ ಹೊರಹಾಕಿದರು.
Advertisement
ಬಾದಾಮಿ ಕ್ಷೇತ್ರದಲ್ಲಿ ಪಂಚಾಯಿತಿ ಮಾಡಲು ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಿಸಿದ್ದೆ. ಸಿಎಂ ಯಡಿಯೂರಪ್ಪ ಬಂದು ಫೈಲ್ ರಿಜೆಕ್ಟ್ ಮಾಡಿಬಿಟ್ಟ. ಸಿಎಂ ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಎಲ್ಲಾ ಅಪ್ಪಗಳು ಕೂಡಿಬಿಟ್ಟಿದ್ದಾರೆ. ಏನು ಮಾಡುವುದು ಕೆಲಸ ಮಾಡಿ ಅಂತ ಹೇಳುತ್ತೇನೆ. ಆದರೂ ಮಾಡುತ್ತಿಲ್ಲ ಎಂದು ಹೇಳಿದರು.
ನೆರೆ ಸಂತ್ರಸ್ತರಿಗೆ ಈವರೆಗೂ ಪರಿಹಾರ ಹಂಚಿಲ್ಲ. ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ. ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರ ಸರ್ಕಾರ 1,863 ಕೋಟಿ ರೂ. ಕೊಟ್ಟಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಕಿದ್ದಾರೆ. ಈ ರಾಜ್ಯದಿಂದ 25 ಸಂಸದರು ಗೆದ್ದಿದ್ದಾರೆ. ಒಮ್ಮೆಯಾದರೂ ಕೇಂದ್ರದ ವಿರುದ್ಧ ಪರಿಹಾರ ಕೊಡಿ ಅಂತ ಗಟ್ಟಿ ಧ್ವನಿ ಎತ್ತಿದ್ದಾರಾ? ಆದರೂ ನೀವು ಅವರನ್ನು ಎರಡು, ಮೂರು ಲಕ್ಷ ಅಂತರದಿಂದ ಗೆಲ್ಲಿಸುತ್ತೀರಿ. ಅದು ಹೇಗೆ? ನಾನು ಸಿಎಂ ಆಗಿದ್ದಿದ್ದರೆ ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಮನೆ ಮುಂದೆ ಧರಣಿ ಕುಳಿತುಕೊಳ್ಳುತ್ತಿದ್ದೆ ಎಂದರು.
ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೋವನಕೊಪ್ಪ ಗ್ರಾಮದ ವ್ಯಾಪ್ತಿಯ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಈ ವೇಳೆ ಗ್ರಾಮದ ಬ್ರಹ್ಮಾನಂದ ಮಠಕ್ಕೆ ಭೇಟಿ ನೀಡಿ ಬ್ರಹ್ಮಾನಂದ ಸ್ವಾಮಿಗಳ ಗದ್ದುಗೆಗೆ ನಮಿಸಿದರು.
ಬಾದಾಮಿ ವಿಧಾನಸಭೆ ಕ್ಷೇತ್ರದ ಗೋವಿನಕೊಪ್ಪ ಗ್ರಾಮದಲ್ಲಿ ರೂ.18 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದೆ. pic.twitter.com/qzxYz4OevR
— Siddaramaiah (@siddaramaiah) January 9, 2020