ಬಿಜೆಪಿಯವರಿಗೆ ಕೇಡುಗಾಲ ಶುರುವಾಗಿದೆ, ಅದಕ್ಕೆ ಹೀಗಾಡ್ತಿದ್ದಾರೆ: ಸಿದ್ದರಾಮಯ್ಯ

Public TV
5 Min Read
SIDDARAMAIAH 3

ಬೆಂಗಳೂರು: ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತೆ ಎಂಬ ಗಾದೆ ಮಾತಿದೆ. ಬಿಜೆಪಿಯವರಿಗೂ ಕೇಡುಗಾಲ ಶುರುವಾಗಿದೆ. ಅದಕ್ಕೆ ಹೀಗೆ ಆಡ್ತಾರೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸತತ 3 ದಿನಗಳಿಂದ ಜಾರಿ ನಿರ್ದೇಶನಾಲಯ (ಇ.ಡಿ) ರಾಹುಲ್ ಗಾಂಧಿ ವಿಚಾರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

RAHUL GANDHI 1

ಕಳೆದ ಮೂರು ದಿನಗಳಿಂದ ಪ್ರತಿನಿತ್ಯ ರಾಹುಲ್ ಗಾಂಧಿ ಅವರನ್ನು ಇ.ಡಿ ಅವರು ವಿಚಾರಣೆಗೆ ಬರಬೇಕು ಎಂದು ಹೇಳಿ ನಿತ್ಯ 9 ರಿಂದ 10 ಗಂಟೆಗಳ ಕಾಲ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವರು ಸೇರಿದಂತೆ ಹಲವು ಜನ ಟ್ರಸ್ಟಿಗಳಿದ್ದಾರೆ. ಇದೊಂದು ಸುಳ್ಳು ಮೊಕದ್ದಮೆ. ಕಾನೂನು ರೀತಿಯ ತನಿಖೆಗೆ ನಮ್ಮ ವಿರೋಧ ಇಲ್ಲ, ಕಾಂಗ್ರೆಸ್ ಪಕ್ಷ ಕಾನೂನನ್ನು ವಿರೋಧಿಸಲ್ಲ. ಆದರೆ ಸುಳ್ಳು ಕೇಸ್ ಹಾಕಿ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಇದ್ದರೂ ಕೇವಲ ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಕಿರುಕುಳ ನೀಡುತ್ತಿದೆ, ಇದಕ್ಕೆ ನಮ್ಮ ವಿರೋಧವಿದೆ ಎಂದರು.

BJP FLAG

ಕೇಂದ್ರದ ಸೂಚನೆಯಂತೆ ವಿಚಾರಣೆ!: ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಇ.ಡಿ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ, ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಬಹುಶಃ ಬ್ರಿಟಿಷರ ಕಾಲದಲ್ಲೂ ಇಂತಹಾ ಘಟನೆ ನಡೆದಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ಗಾಂಧೀಜಿ, ನೆಹರು ಕುಟುಂಬ ಹೋರಾಟ ನಡೆಸಿದೆ, ನೆಹರು ಕೂಡ ಗಾಂಧಿಯವರಂತೆ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಆದರೆ ಬ್ರಿಟಿಷರು ಬಿಜೆಪಿಯವರಂತೆ ನಡೆದುಕೊಂಡಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ತ್ಯಾಗ ಇತಿಹಾಸದಲ್ಲಿ ದಾಖಲಾಗಿದೆ. ಈ ರೀತಿ ಬ್ರಿಟಿಷರು ಕಿರುಕುಳ ನೀಡಿದ್ದರೆ ಸ್ವಾತಂತ್ರ್ಯ ಚಳವಳಿ ಮಾಡಲು ಆಗುತ್ತಿತ್ತಾ? ಸ್ವತಂತ್ರ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ವರ್ಷ ಸಭೆಗಳನ್ನು ಮಾಡುತ್ತಿತ್ತು, ಅದಕ್ಕೆ ಅವಕಾಶ ಇತ್ತು. ಆದರೆ ಈಗ ಎಐಸಿಸಿ ಕಚೇರಿಯನ್ನೇ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡು ಸೀಜ್ ಮಾಡಲಾಗಿದೆ. ಕಾಂಗ್ರೆಸ್ ಕಚೇರಿಗೆ ಹೋಗುವವರನ್ನು ಬಂಧಿಸುವುದು, ಹೊಡೆಯುವುದು, ಅವರ ಮೇಲೆ ದೌರ್ಜನ್ಯ ಮಾಡಲಾಗ್ತಿದೆ. ಇದೇನು ಪೊಲೀಸ್ ರಾಜ್ಯವೇ? ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗಲೂ ಈ ರೀತಿ ನಡೆದಿರಲಿಲ್ಲ. ಎಐಸಿಸಿ ಕಚೇರಿಗೆ ನುಗ್ಗಿ ಅಲ್ಲಿದ್ದವರನ್ನು ಹೊಡೆದು ಆಚೆಗೆ ಹಾಕಿದ್ದಾರೆ. ಇವರದ್ದು ಸರ್ವಾಧಿಕಾರಿ ಸರ್ಕಾರವೇ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಇಲ್ಲವಾಗಿದೆ ಎಂದರು.

CONGRESS 4

ಪ್ರತಿಭಟನೆ ಮಾಡುವುದು ಭಾರತೀಯ ಸಂವಿಧಾನ ಪ್ರತಿಯೊಬ್ಬನಿಗೂ ನೀಡಿರುವ ಹಕ್ಕು. ಇದನ್ನು ತಡೆಯುವ ಅಧಿಕಾರ ಯಾವ ಸರ್ಕಾರಕ್ಕೂ ಇಲ್ಲ. ನಮ್ಮ ಪ್ರತಿಭಟನೆ ಶಾಂತಿಯುತವಾಗಿದೆ. ಕಾಂಗ್ರೆಸ್ ಕಚೇರಿಗೆ ಹೋಗದಂತೆ ತಡೆದಿದ್ದು ಏಕೆ? ಬಂಧಿಸುತ್ತಿರುವುದು ಏಕೆ? ಡಿ.ಕೆ ಸುರೇಶ್ ಹಾಲಿ ಸಂಸದ, ಬಹುಶಃ ಅಪರಾಧಿ ಜೊತೆಗೂ ಪೊಲೀಸರು ಆ ರೀತಿ ವರ್ತಿಸಲ್ಲ. ದಿನೇಶ್ ಗುಂಡೂರಾವ್, ಹೆಚ್.ಕೆ ಪಾಟೀಲ್ ಅವರೊಂದಿಗೆ ದೌರ್ಜನ್ಯದಿಂದ ವರ್ತಿಸಿದ್ದಾರೆ. ಇದನ್ನು ನಮ್ಮ ಪಕ್ಷ ರಾಜ್ಯದಲ್ಲಿ ಇದನ್ನು ಒಕ್ಕೊರಲಿನಿಂದ ಖಂಡಿಸುತ್ತದೆ.

CONGRESS 6

ನಿನ್ನೆ ಸುಮಾರು 30,000 ಜನ ಸೇರಿ ಪ್ರತಿಭಟನೆ ಮಾಡಿದ್ದೆವು. ಇದಕ್ಕೆ ಪೊಲೀಸರು ಅವಕಾಶ ನೀಡಿಲ್ಲ, ಬಂಧಿಸಿ ನಂತರ ಬಿಟ್ಟರು. ನಮ್ಮ ಹೋರಾಟದ ಹಕ್ಕನ್ನು ಇವರಿಂದ ದಮನ ಮಾಡಲು ಆಗಲ್ಲ. ವಿನಾಕರಣ ಜೈಲಿಗೆ ಹಾಕುವುದಾದರೆ ಹಾಕಲಿ ನಾವು ಹೆದರಲ್ಲ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ 8 ರಿಂದ 10 ಗಂಟೆ ಇಟ್ಟುಕೊಳ್ಳೋದು ಕಾನೂನು ಉಲ್ಲಂಘನೆ. ಯಾರು ನಿಮಗೆ ಈ ಅಧಿಕಾರ ನೀಡಿದ್ದು? ಸಂವಿಧಾನವನ್ನೇ ಬದಲಾವಣೆ ಮಾಡುತ್ತೀರ? ಕಾನೂನುಗಳನ್ನು ಬದಲಾಯಿಸ್ತೀರ? ಇಂದು ಎಲ್ಲ ಕಾನೂನುಗಳನ್ನು, ಪ್ರಜಾಪ್ರಭುತ್ವದ ಹಕ್ಕುಗಳನ್ನು ಗಾಳಿಗೆ ತೂರಿ ಜನರ ಹಕ್ಕುಗಳನ್ನು ಹತ್ತಿಕ್ಕಲು ಹೊರಟಿದ್ದೀರ, ನೀವೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತೀರಿ ಎಂದು ತಿಳಿದುಕೊಂಡಿದ್ದೀರ? ಆದರೆ ಜನ ಇದನ್ನು ಸಹಿಸಲ್ಲ. ಬಿಜೆಪಿಯವರಿಗೆ ಕೇಡುಗಾಲ ಬಂದಿದೆ ಎಂದೆನಿಸುತ್ತದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಎಂಬ ಗಾದೆ ಇದೆ, ಹಾಗೆ ಶುರು ಮಾಡಿದ್ದಾರೆ ಎಂದರು.

SIDDARAMAIAH 2

ನಾಳೆ ರಾಜಭವನ ಮುತ್ತಿಗೆ: ನಮ್ಮ ಎಲ್ಲಾ ಶಾಸಕರು, ಸಂಸದರು, ಕಾರ್ಯಕರ್ತರು, ನಾಯಕರು ಪಾದಯಾತ್ರೆ ಮೂಲಕ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ನಾಡಿದ್ದು ಜಿಲ್ಲಾ ಕೇಂದ್ರಗಳಲ್ಲಿ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ತಮ್ಮ ಕಾನೂನು ಬಾಹಿರ ಕ್ರಮ ನಿಲ್ಲಿಸದೆ ಹೋದರೆ ನಾವು ನಿರಂತರ ಹೋರಾಟವನ್ನು ಮಾಡಬೇಕಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹೋರಾಟಗಳು ಹೊಸದೇನಲ್ಲ. ಈ ದೇಶಕ್ಕೆ ಹೋರಾಟ ಮಾಡಿಯೇ ಸ್ವಾತಂತ್ರ್ಯ ತಂದುಕೊಟ್ಟದ್ದು. ಬಿಜೆಪಿಯವರು ಯಾರೂ ತ್ಯಾಗ ಬಲಿದಾನ ಮಾಡಿಲ್ಲ. ನರೇಂದ್ರ ಮೋದಿ ಅವರಾಗಲೀ ಅಮಿತ್ ಶಾ ಅವರಾಗಲೀ ಸ್ವಾತಂತ್ರ್ಯ ಬಂದಮೇಲೆ ಹುಟ್ಟಿದ್ದು. ಇವರೆಲ್ಲ ಸ್ವಾತಂತ್ರ್ಯದ ಫಲಾನುಭವಿಗಳು. ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ, ಅಮಿತ್ ಶಾ ಗೃಹ ಸಚಿವರಾಗಿದ್ದರೆ ಅದು ಕಾಂಗ್ರೆಸ್ ಪಕ್ಷದ ಹೋರಾಟದ ಫಲ ಎಂಬುದನ್ನು ಅವರು ನೆನೆಯಬೇಕು. ಬ್ರಿಟಿಷರ ಜೊತೆ ಶಾಮೀಲಾಗಿದ್ದವರು ಬಿಜೆಪಿಯವರು ಎಂದು ಆರೋಪಿಸಿದರು.

CONGRESS 2

ಪ್ರತಿಭಟನೆ ನಮ್ಮ ಹಕ್ಕು: ದೆಹಲಿಯಲ್ಲಿ ನಡೆಯುತ್ತಿರುವ ಘಟನೆಯನ್ನು ಕೆಪಿಸಿಸಿ ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ರಾಜ್ಯದ ಜನ ಖಂಡಿಸುತ್ತಾರೆ. ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಾಗ ಜನ ಸುಮ್ಮನಿರಲ್ಲ, ದಂಗೆ ಏಳುತ್ತಾರೆ. ಬಿಜೆಪಿಯವರೇ ಎಚ್ಚರಿಕೆಯಿಂದ ಇರಿ. ಅನ್ಯಾಯಗಳು ನಿರಂತರವಾಗಿ ನಡೆಯುತ್ತಿದ್ದರೂ ಸುಮ್ಮನಿರೋಕೆ ಆಗುತ್ತಾ? ದ್ವೇಷ ರಾಜಕಾರಣ ನೋಡಿಕೊಂಡು ಸುಮ್ಮನಿರೋಕೆ ಆಗುತ್ತಾ? ಗಾಂಧೀಜಿಯವರು ಕಾನೂನನ್ನು ಮುರಿದೆ ಪ್ರತಿಭಟನೆ ಮಾಡಿದ್ದು. ಇದೇ ಅಮಿತ್ ಶಾ ಅವರು ಮುಂದಾಳತ್ವ ತೆಗೆದುಕೊಂಡು ಹಲವು ಪ್ರತಿಭಟನೆ ನಡೆಸಿಲ್ವಾ? ಆರ್ಟಿಕಲ್ 19 ಇನ್ನೂ ಸಂವಿಧಾನದಲ್ಲಿ ಇದೆ. ಪ್ರತಿಭಟನೆ ನಮ್ಮ ಹಕ್ಕು ಎಂದರು.

CONGRESS 3

ಬಿಜೆಪಿಯವರ ಮೇಲೆ ಕೇಸ್ ಯಾಕಿಲ್ಲ?: ಬಿಜೆಪಿಯವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ನಾಗೇಶ್ ಅವರ ಮನೆ ಮುಂದೆ ಚಡ್ಡಿ ಸುಟ್ಟಿದಕ್ಕೆ ನಮ್ಮ ಪಕ್ಷದ ಹುಡುಗರ ಮೇಲ್ ಕೇಸ್ ಹಾಕಿ ಜೈಲಿಗೆ ಕಳಿಸಿದ್ರು, ಆದರೆ ಛಲವಾದಿ ನಾರಾಯಣ ಸ್ವಾಮಿ ಹಳೇ ಚಡ್ಡಿಗಳನ್ನು ಹೊತ್ತುಕೊಂಡು ನಮ್ಮ ಮನೆ ಮುಂದೆ ಬಂದಾಗ ಕೇಸ್ ಹಾಕಿದ್ರಾ? ಯಾಕೆ ಅವರಿಗೆ ಕಾನೂನು ಅನ್ವಯವಾಗಲ್ವ? ಈಶ್ವರಪ್ಪ ಸೆಕ್ಷನ್ 144 ಮೀರಿದ್ರು. ಕೇಂದ್ರದ ಸಚಿವ ಖೂಬಾ ಬೀದರ್ ನಲ್ಲಿ 144 ಸೆಕ್ಷನ್ ಮೀರಿ ಪ್ರತಿಭಟನೆ ಮಾಡಿದ್ರು ಅವರ ಮೇಲೆ ಕೇಸ್ ಹಾಕಿದ್ರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

SIDDARAMAIAH 4

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ‘ಭಾರತ್ ಜೋಡೊ’ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ, ಹೀಗಾಗಿ ಅವರ ವರ್ಚಸ್ಸು ಕಡಿಮೆ ಮಾಡಲು ಈ ರೀತಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು 3 ದಿನ ವಿಚಾರಣೆ ಮಾಡಿ ವಿಚಾರಣೆ ಮಾಡಿ ಕಳಿಸಿದ್ರು. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಮುಖಂಡರು, ಅವರನ್ನು ಬಿಡಿ, ನಮ್ಮ ಪಕ್ಷದ ಯಾವುದೇ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಪೊಲೀಸರು ಕಾನೂನು ಬಾಹಿರವಾಗಿ ನಡೆಸಿಕೊಂಡರೂ ಪಕ್ಷ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *