ರಾಮನಗರ: ನಾನು ಕೈ ಎತ್ತಿಸಿಕೊಂಡು ಬೆನ್ನಿಗೆ ಚೂರಿ ಹಾಕಿಸಿಕೊಂಡಿಲ್ವಾ..?. ಅದೇ ರೀತಿ ಇಬ್ಬರೂ ಕೈ ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರ ಬೆನ್ನಿಗೆ ಯಾರು ಚೂರಿ ಹಾಕ್ತಾರೆ ಅಂತ ಆನಂತರ ನೋಡೊಣ ಎಂದು ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಕೈಕೈ ಹಿಡಿದುಕೊಂಡು ಒಗ್ಗಟ್ಟಿನ ಮಂತ್ರಪಠಿಸಿದ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಕಣ್ವ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕೈಕೈ ಹಿಡ್ಕೊಂಡು ಕೊನೆಗೆ ಕೈ ಎತ್ತಲಿಲ್ವಾ..?. ಕಳೆದ ಮೈತ್ರಿ ಸರ್ಕಾರದಲ್ಲಿ ನನಗೂ ಕೈಕೊಟ್ರು. ಕೈ ಎತ್ತುವುದು, ಕೈ ಇಳಿಸುವುದು ಸಂದರ್ಭಕ್ಕೆ ತಕ್ಕಂತೆ ನಡೆಯುತ್ತವೆ ಎಂದರು. ಇದನ್ನೂ ಓದಿ: ಸಿಎಂ ಕುರ್ಚಿ ಕಿತ್ತಾಟಕ್ಕೆ ಡಿಕೆ-ಸಿದ್ದು ಕದನ ವಿರಾಮ
ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಅಮಿಶ್ ಶಾ ವಾರ್ನಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇವಲ ಆರಗ ಜ್ಞಾನೇಂದ್ರಗೆ ಅಲ್ಲ ಇಡೀ ಸರ್ಕಾರಕ್ಕೆ ವಾರ್ನಿಂಗ್ ಕೊಡಬೇಕು. ರಾಜ್ಯ ಎಲ್ಲಾ ಮಂತ್ರಿಗಳಿಗೂ ವಾರ್ನಿಂಗ್ ಕೊಡಬೇಕು. ರೈತರಿಗೆ ಕೊಡುವ ಸಪ್ಸಿಡಿಗೂ ಮಂತ್ರಿಗಳು 8ಪರ್ಸೆಂಟ್ ಕಮಿಷನ್ ಕೇಳ್ತಿದ್ದಾರೆ. ಇವೆಲ್ಲಾ ಹೊಸ ಸಿಸ್ಟಮ್ ಗಳನ್ನ ಪ್ರಾರಂಭಿಸಿದ್ದಾರೆ. ರಾಜ್ಯ ಲೂಟಿ ಆಗ್ತಿದೆ, ಇದರಲ್ಲಿ ಅಮಿತ್ ಶಾಗೂ ಶೇರ್ ಹೋಗ್ತಿದ್ಯಾ ಎಂದು ಪ್ರಶ್ನಿಸಿದರು.
ಕೇವಲ ಕಾನೂನು ಸುವ್ಯವಸ್ಥೆ ಒಂದೇ ಅಲ್ಲ ರಾಜ್ಯ ಲೂಟಿ ಆಗ್ತಿದೆ. ಆಡಳಿತದಲ್ಲಿ “ಎ ಗ್ರೇಡ್” ನಲ್ಲಿದ್ದ ರಾಜ್ಯ ಇದು. ಇಂತಹ ಆಡಳಿತವನ್ನು ಸಂಪೂರ್ಣ ಮಾಡ್ತಾ ಇದ್ದಾರೆ. ಕೇಂದ್ರ ಗೃಹ ಸಚಿವರಿಗೆ ಪ್ರಾಮಾಣಿಕತೆ, ರಾಜ್ಯದ ಬಗ್ಗೆ ಕಳಕಳಿ ಇದ್ರೆ ಮೊದಲು ಸರ್ಕಾರಕ್ಕೆ ಕಿವಿ ಹಿಂಡಲಿ ಎಂದು ಹೆಚ್‍ಡಿಕೆ ಆಗ್ರಹಿಸಿದರು.