ಮುಂಬೈ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರಿದ್ದಾಗ ಶಿವಸೇನೆ ಹುಟ್ಟಿರಲಿಲ್ಲ. 1984ರ ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿ ಬಿಜೆಪಿ ಟಿಕೆಟ್‍ನಲ್ಲಿ ಸ್ಪರ್ಧಿಸಿದ್ದರು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ನಗರ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಸೇನೆ ನಾಲ್ಕನೇ ಸ್ಥಾನ ಗಳಿಸಿದೆ. ಈ ಹತಾಶೆಯನ್ನು ಬಿಜೆಪಿ ವಿರುದ್ಧ ಕಿಡಿಕಾರುವ ಮೂಲಕ ಉದ್ಧವ್ ಠಾಕ್ರೆ ಹೊರಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಮ ಜನ್ಮಭೂಮಿ ಅಭಿಯಾನ ನಡೆದಾಗ ನೀವು ಎಲ್ಲಿದ್ದೀರಿ? ಆ ಸಂದರ್ಭದಲ್ಲಿ ನಮ್ಮ ಮೇಲೆ ಗುಂಡುಗಳು ಮತ್ತು ಲಾಠಿ ಪ್ರಹಾರ ನಡೆದಿತ್ತು. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಕಿಡಿಕಾರಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಶಿವಸೇನೆಯು ಕಳೆದ 25 ವರ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ವ್ಯರ್ಥವಾಯಿತು. ಬಿಜೆಪಿ ಹಿಂದುತ್ವವನ್ನು ಕೇವಲ ರಾಜಕೀಯ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ
2019ರ ಮಹಾರಾಷ್ಟ್ರ ಚುನಾವಣೆಯ ನಂತರ ಅಧಿಕಾರ ಹಂಚಿಕೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಂತರದಲ್ಲಿ ಎನ್‍ಸಿಪಿ ಮತ್ತು ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆ ಸರ್ಕಾರವನ್ನು ರಚಿಸಿತ್ತು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ