ನವದೆಹಲಿ: ಭಾರತೀಯ ವಾಯುಪಡೆಯ (IAF) ಮಾಜಿ ಅಧಿಕಾರಿ ಹಾಗೂ ಅವರ ಪತ್ನಿ ಇಬ್ಬರೂ ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯಲ್ಲಿರುವ (South Delhi) ತಮ್ಮ ನಿವಾಸದಲ್ಲಿ ಅಜಯ್ ಪಾಲ್ (37), ಪತ್ನಿ ಮೋನಿಕಾ (32) ಪ್ರತ್ಯೇಕ ಸಂದರ್ಭಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೆ 500 ರೂ. ಕೊಟ್ಟು ಕರ್ಕೊಂಡು ಬರಬೇಕು- ಸಿದ್ದರಾಮಯ್ಯ ಮಾತು ವೈರಲ್
ಮೋನಿಕಾ ಪಾಲ್ ತನ್ನ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ, ಬಾಯಿಯಿಂದ ನೊರೆ ಹೊರಬರುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಅಜಯ್ ಪಾಲ್ ಮೃತಪಟ್ಟಿದ್ದರು. ಇದನ್ನೂ ಓದಿ: ತ್ರಿಪುರಾದಲ್ಲಿ ಬಿಜೆಪಿ, ನಾಗಾಲ್ಯಾಂಡ್ ಎನ್‌ಡಿಪಿಪಿ, ಮೇಘಾಲಯದಲ್ಲಿ ಎನ್‌ಪಿಪಿ ಮುನ್ನಡೆ
ನಂತರ ಮನೆಗೆ ಮರಳಿದ ಮೋನಿಕಾ ಪಾಲ್ ಮಧ್ಯಾಹ್ನದ ವೇಳೆಗೆ ತಾನೂ ವಿಷ ಸೇವಿಸಿದ್ದಾರೆ. ಅಜಯ್ ಪಾಲ್ ಆತ್ಮಹತ್ಯೆ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಮನೆಗೆ ಬಂದಾಗ ಯಾರೂ ಇಲ್ಲದನ್ನ ಕಂಡು ಸಂಶಯಗೊಂಡಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಆಕೆಯೂ ಮೃತಪಟ್ಟಿರುವುದು ತಿಳಿದುಬಂದಿದೆ.
ಅಜಯ್ ಪಾಲ್ ಇತ್ತೀಚೆಗಷ್ಟೇ ವಾಯುಸೇನೆ ತೊರೆದಿದ್ದರು. ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು (Delhi Police) ತನಿಖೆ ನಡೆಸುತ್ತಿದ್ದಾರೆ.