ನವದೆಹಲಿ: ಪಕ್ಷ, ವಿಪಕ್ಷ ಬಿಟ್ಟು ನಿಷ್ಪಕ್ಷವಾಗಿ ಅಭಿವೃದ್ಧಿಗೆ ಕೈಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸಂಸತ್ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಸತ್ತಿನ ಘನತೆ ಉಳಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷ ಅಧಿಕಾರ ನಡೆಸುತ್ತೇವೆ. ಸಂಸತ್‍ನಲ್ಲಿ ವಿರೋಧ ಪಕ್ಷ ಪಾತ್ರ ಪ್ರಮುಖವಾಗಿದೆ. ಪ್ರತಿಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸುವ ಅವಶ್ಯಕತೆಯಿಲ್ಲ. ಅವರು ಸಂಸತ್‍ನಲ್ಲಿ ಸಕ್ರಿಯವಾಗಿ ಮಾತನಾಡುತ್ತಾರೆ ಹಾಗೂ ಭಾಗವಹಿಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.
Prime Minister Narendra Modi arrives at the Parliament for 17th Lok Sabha, says, "Every word of the Opposition is important." pic.twitter.com/TxTVzQkOF2
— ANI (@ANI) June 17, 2019
ಬಹಳ ವರ್ಷಗಳ ನಂತರ ಒಂದು ಪಕ್ಷಕ್ಕೆ ಭಾರೀ ಬಹುಮತವನ್ನು ದೇಶದ ಜನತೆ ನೀಡಿದ್ದಾರೆ. ಇದು ಅವರ ಸೇವೆಗೆ ಸಿಕ್ಕ ಉತ್ತಮ ಅವಕಾಶ. ಜನರ ಪರವಾಗಿರುವ ನಿರ್ಧಾರಗಳನ್ನು ಬೆಂಬಲಿಸುವಂತೆ ಎಲ್ಲ ವಿಪಕ್ಷಗಳಿಗೆ ಕೇಳಿಕೊಳ್ಳುತ್ತೇನೆ ಎಂದು ಮೋದಿ ಹೇಳಿದರು.
ಈ ಬಾರಿಯ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಸತ್‍ನಲ್ಲಿದ್ದಾರೆ. ಇದು ನನಗೆ ಬಹಳ ಖುಷಿ ತಂದಿದೆ ಎಂದು ತಿಳಿಸಿದರು.
17ನೇ ಲೋಕಸಭೆಯ ಮೊಟ್ಟ ಮೊದಲ ಅಧಿವೇಶನ ಇಂದು ಆಂಭವಾಗಿದ್ದು, ಸಂಸತ್‍ಗೆ ಆಯ್ಕೆಯಾದ 542 ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಸುರೇಶ್ ಅಂಗಡಿ ಅವರು ಕನ್ನಡದಲ್ಲಿಯೇ ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಇತರೇ ಸಂಸದರು ಮೇಜು ಕುಟ್ಟಿ ಸ್ವಾಗತಿಸಿದರು.
542 ಸಂಸದರಲ್ಲಿ 267 ಮಂದಿ ಲೋಕಸಭೆಗೆ ಹೊಸ ಸದಸ್ಯರಾಗಿದ್ದು, ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿ 303 ಸದಸ್ಯ ಬಲದ ಪ್ರಚಂಡ ಬಹುಮತ ಹೊಂದಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಲೋಕಸಭೆಯಲ್ಲಿ ಯಾವುದೇ ಅಧಿಕೃತ ವಿಪಕ್ಷವಿಲ್ಲ. ಕಾಂಗ್ರೆಸ್ 52 ಸಂಸದರನ್ನು ಹೊಂದಿದ್ದರೂ ಅಧಿಕೃತ ವಿಪಕ್ಷ ಸ್ಥಾನಕ್ಕೆ 55 ಸ್ಥಾನಗಳು ಅಗತ್ಯವಿದೆ. ಉಳಿದಂತೆ ಡಿಎಂಕೆ -23, ಟಿಎಂಸಿ -22, ಜೆಡಿಯು 16, ಬಿಎಸ್‍ಪಿ -10, ವೈಎಸ್‍ಆರ್ಪಿ -22, ಶಿವಸೇನೆ -18, ಬಿಜೆಡಿ-12, ಟಿಆರ್‍ಎಸ್ -9, ಎಲ್‍ಜೆಪಿ – 6 ಸಂಸದರನ್ನು ಹೊಂದಿದೆ.