ಚಿತ್ರದುರ್ಗ: ಚಿರತೆ ಸೆರೆಗೆ ಇಟ್ಟಿದ್ದ ಬೋನ್ ನೋಡಲು ತೆರಳಿದ್ದ ಅರಣ್ಯ ಇಲಾಖೆ ವೀಕ್ಷಕರೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಮೈಲಾರಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ 10 ಗಂಟೆ ವೇಳೆಗೆ ಮುತ್ತಿನದೇವರ ಗುಡ್ಡದ ಬಳಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಇಟ್ಟಿದ್ದ ಬೋನ್ ನೋಡಲು ಅರಣ್ಯ ವೀಕ್ಷಕ ಹೆಗ್ಗೆರೆ ಗ್ರಾಮದ ಎಚ್.ಆರ್ ಬಸವರಾಜ್ ತೆರಳಿದ್ದರು. ಈ ವೇಳೆ ಮೈಲಾರಪುರದ ಕಾವಲು ಪ್ರದೇಶದಲ್ಲಿ ತಮ್ಮ ಬೈಕ್ ನಿಲ್ಲಿಸಿ ಅರಣ್ಯದೊಳಗೆ ಹೋಗಿದ್ದರು. ನಂತರ ಅವರ ಸಹೋದ್ಯೋಗಿಗೆ ಕರೆ ಮಾಡಿದ್ದ ಬಸವರಾಜ್, ‘ಎರಡು ಚಿರತೆಗಳು ನನ್ನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಬೇಗ ಬನ್ನಿ’ ಎಂದು ಹೇಳಿ ದೂರವಾಣಿ ಕರೆಯನ್ನು ಕಡಿತಗೊಳಿಸಿದ್ದರು.
Advertisement
Advertisement
ಈ ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶ್ರೀರಾಂಪುರ ಪೊಲೀಸ್ ಠಾಣೆಯ ಪಿಎಸ್‍ಐ ವಿಶ್ವನಾಥ್ ನೇತೃತ್ವದ ತಂಡ ಸ್ಥಳಕ್ಕೆ ಬಂದು ನೋಡಿದಾಗ ಬಸವರಾಜ್ ಬೈಕ್ ಮಾತ್ರ ಸ್ಥಳದಲ್ಲಿತ್ತು. ಆದರೆ ಬಸವರಾಜ್ ನಾಪತ್ತೆಯಾಗಿದ್ದರು. ಬಳಿಕ ಈ ಬಗ್ಗೆ ಬಸವರಾಜ್ ಕುಟುಂಬಸ್ಥರಿಗೆ ತಿಳಿಸಿ ಅವರ ಬಗ್ಗೆ ವಿಚಾರಿಸುವಂತೆ ಸೂಚಿಸಲಾಯಿತು. ಆದರೆ ಈವರೆಗೂ ಬಸವರಾಜ್ ಪತ್ತೆಯಾಗಿಲ್ಲ. ಹೀಗಾಗಿ ಬಸವರಾಜ್ ಪತ್ತೆಗಾಗಿ ಅರಣ್ಯಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಅವರ ಕುಟುಂಬದಲ್ಲಿ ಆತಂಕ ಮನೆಮಾಡಿದೆ.