ಮಂಗಳೂರು: ಅಕ್ರಮ ಮರ ಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿದ ಅರಣ್ಯ ರಕ್ಷಕ ಸಿಬ್ಬಂದಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಗುಂಡ್ಯದಲ್ಲಿ ನಡೆದಿದೆ.
ರಾಜೇಶ್ ಗಾಯಗೊಂಡ ಅರಣ್ಯ ರಕ್ಷಕ ಸಿಬ್ಬಂದಿಯಾಗಿದ್ದಾರೆ. ಇವರು ಎಂದಿನಂತೆ ಬುಧವಾರ ಶಿರಾಡಿ ಘಾಟ್ ಬಳಿಯ ಗುಂಡ್ಯದ ಅರಣ್ಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ತಡರಾತ್ರಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಶಂಕೆ ಮೇರೆಗೆ ಲಾರಿಯೊಂದನ್ನು ತಡೆದು ತಪಾಸಣೆ ನಡೆಸಿದ್ದಾರೆ. ಲಾರಿಯಲ್ಲಿ ಮರದ ದಿಮ್ಮಿಗಳು ಕಂಡುಬಂದ ಹಿನ್ನೆಲೆಯಲ್ಲಿ ಲಾರಿಯಲ್ಲಿದ್ದವರಿಗೆ ಮರದ ದಾಖಲೆಗಳನ್ನು ತೋರಿಸುವಂತೆ ಹೇಳಿದ್ದಾರೆ.
Advertisement
ಈ ವೇಳೆ ಲಾರಿಯಲ್ಲಿದ್ದ ಮೂವರು ರಾಜೇಶ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಸಮವಸ್ತ್ರವನ್ನು ಸಹ ಹರಿದು ಹಾಕಿದ್ದಾರೆ. ಹಲ್ಲೆ ಬಳಿಕ ಮರಗಳ್ಳರು ಲಾರಿಯೊಂದಿಗೆ ಹಾಸನ ಕಡೆಗೆ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ರಾಜೇಶ್‍ನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಮರಗಳ್ಳರಿಂದ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರಣ್ಯ ರಕ್ಷಕ ಸಿಬ್ಬಂದಿಯನ್ನು ಇದುವರೆಗೂ ಯಾವುದೇ ಅರಣ್ಯಾಧಿಕಾರಿಗಳು ಭೇಟಿಯಾಗಿಲ್ಲ. ಇದರಿಂದಾಗಿ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.